ADVERTISEMENT

ಸ್ವಾಮೀಜಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಚಂದ್ರಶೇಖರ್, ನಾಗಾನಂದಸ್ವಾಮಿ, ಪ್ರಸನ್ನಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 16:34 IST
Last Updated 6 ಆಗಸ್ಟ್ 2024, 16:34 IST
ಎಚ್.ಜಿ.ಚಂದ್ರಶೇಖರ್
ಎಚ್.ಜಿ.ಚಂದ್ರಶೇಖರ್   

ತುಮಕೂರು: ತುಮಕೂರು ವಿಶ್ವವಿದ್ಯಾಲಯ ಈ ಬಾರಿ ಸ್ವಾಮೀಜಿ ಸೇರಿದಂತೆ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ.

ಜಿಲ್ಲೆಯವರಾದ ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಕ್ರೀಡಾಪಟು ಎಸ್.ಸಿ.ನಾಗಾನಂದಸ್ವಾಮಿ ಹಾಗೂ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಗೌರವ ಡಾಕ್ಟರ್‌ಗೆ ಆಯ್ಕೆ ಮಾಡಲಾಗಿದೆ.

ವಿ.ವಿ ಆವರಣದಲ್ಲಿ ಆ. 7ರಂದು ನಡೆಯುವ 17ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ.

ADVERTISEMENT

ಚಂದ್ರಶೇಖರ್: ಎಂಜಿನಿಯರಿಂಗ್ ಪದವೀಧರರಾದ ಎಚ್.ಜಿ.ಚಂದ್ರಶೇಖರ್ ನಗರದ ಹೊರ ವಲಯದ ಹಿರೇಹಳ್ಳಿಯಲ್ಲಿ ಕೈಗಾರಿಕೆ ನಡೆಸುತ್ತಿದ್ದು, ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಕೈಗಾರಿಕೆಯಲ್ಲಿ ಉತ್ಪಾದಿಸುವ ತಾಮ್ರ ಹಾಗೂ ಇತರೆ ಉತ್ಪನ್ನಗಳನ್ನು ವಂದೇ ಭಾರತ್ ರೈಲಿನಲ್ಲಿ ಬಳಸಲಾಗುತ್ತಿದೆ. ತಾಮ್ರ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ. ಕನ್ನಡಿಗರಿಗಷ್ಟೇ ಉದ್ಯೋಗ ನೀಡಿರುವುದು ವಿಶೇಷ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಅಧ್ಯಕ್ಷರಾಗಿದ್ದರು. ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ನಾಗಾನಂದಸ್ವಾಮಿ: ಜಿಲ್ಲೆಯ ಸುಗ್ಗನಪಾಳ್ಯ ಗ್ರಾಮದವರಾದ ಎಸ್.ಸಿ.ನಾಗಾನಂದಸ್ವಾಮಿ ಜಲಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜಲಸ್ತಂಭನ ಕೌಶಲದಿಂದ ಗಮನ ಸೆಳೆದಿದ್ದಾರೆ. ದಿನದ 24 ಗಂಟೆಗಳ ಕಾಲ ನೀರಿನಲ್ಲಿ ಯೋಗಾಸನ ಮಾಡಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಸ್ವಾಮೀಜಿ: ಆಧ್ಯಾತ್ಮಿಕ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಹಿಂದುಳಿದ ಸಮುದಾಯಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜನಹಳ್ಳಿಯಿಂದ ಬೆಂಗಳೂರು ವರೆಗೆ ಸುಮಾರು 400 ಕಿ.ಮೀ ಪಾದಯಾತ್ರೆ ನಡೆಸಿ ಗಮನ ಸೆಳೆದಿದ್ದರು.

ಎಸ್.ಸಿ.ನಾಗಾನಂದಸ್ವಾಮಿ
ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.