ತುಮಕೂರು: ನಗರದ ಹೊರ ವಲಯದ ಗೆದ್ದಲಹಳ್ಳಿಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಹಿಂದಿನ ಜಿಲ್ಲಾಧಿಕಾರಿ ಸೇರಿ ಇತರೆ ಅಧಿಕಾರಿಗಳು ನೃತ್ಯ ಮಾಡಿ, ಹೆಣ್ಣು ಮಕ್ಕಳ ಗೌರವ, ಸ್ವಾತಂತ್ರ್ಯ, ಗೌಪ್ಯತೆಗೆ ಧಕ್ಕೆ ತಂದಿರುವುದು ಬಯಲಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಚಿಸಿದ ಮೂವರು ಸದಸ್ಯರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿಯು ಆಯೋಗಕ್ಕೆ ವರದಿ ಸಲ್ಲಿಸಿದ್ದು, ಹೆಣ್ಣು ಮಕ್ಕಳ ಜತೆ ಅಧಿಕಾರಿಗಳು ಗೌರವಯುತವಾಗಿ ನಡೆದುಕೊಂಡಿಲ್ಲ ಎಂಬುದರತ್ತ ಬೊಟ್ಟುಮಾಡಿ ತೋರಿಸಿದೆ.
ಹಾಸ್ಟೆಲ್‌ನಲ್ಲಿ ದೀಪಾವಳಿ ಆಚರಣೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ (2023ರ ನವೆಂಬರ್ 16) ಹಮ್ಮಿಕೊಳ್ಳಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ತಹಶೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಬಾಲಕಿಯರ ಜತೆಗೆ ನೃತ್ಯ ಮಾಡಿ, ಸಭ್ಯತೆ ಮೀರಿ ನಡೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಧಿಕಾರಿಗಳು ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು.
ಈ ಆರೋಪದ ಸತ್ಯಾಸತ್ಯತೆ ಪರಿಶೀಲನೆಗೆ ಎಚ್.ಸಿ.ರಾಘವೇಂದ್ರ, ಅಂಜಲಿ ರಾಮಣ್ಣ, ಸಿ.ವಿ.ತಿರುಮಲರಾವ್ ಅವರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯನ್ನು ಆಯೋಗ ರಚಿಸಿತ್ತು.
ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳು, ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ನಾಗರಿಕ ಸೇವಾ ನಡತೆ ನಿಯಮ 2021 ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ), ರಾಜ್ಯ ಮಕ್ಕಳ ರಕ್ಷಣಾ ನೀತಿ 2016ರ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮದ ಸ್ಪಷ್ಟ ರೂಪುರೇಷೆ, ಆರಂಭದಿಂದ ಅಂತ್ಯದವರೆಗೆ ಏನು ನಡೆಯಿತು? ಎಂಬುದನ್ನು ಸ್ಪಷ್ಟವಾಗಿ ತನಿಖಾ ಸಮಿತಿಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಮಕ್ಕಳ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವ, ದೀಪಾವಳಿ, ಜಿಲ್ಲಾಧಿಕಾರಿಗೆ ಅಭಿನಂದನಾ ಕಾರ್ಯಕ್ರಮ ಎಂದು ಒಬ್ಬೊಬ್ಬರು ಒಂದೊಂದು ರೀತಿ ಹೇಳಿದ್ದಾರೆ. ಕಾರ್ಯಕ್ರಮವನ್ನು ಮಕ್ಕಳೇ ಆಯೋಜಿಸಿದ್ದು ಎಂದು ವಿಭಿನ್ನ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ಛಾಯಾಚಿತ್ರ, ದಾಖಲೆಗಳನ್ನೂ ಇಟ್ಟುಕೊಂಡಿಲ್ಲ. ಅನೇಕ ವಿಚಾರಗಳನ್ನು ಮರೆಮಾಚಲಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
ವರದಿಯ ಪ್ರಮುಖ ಅಂಶಗಳು
* ನಿಜವಾಗಿ ಯಾವ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬ ವಿಚಾರವನ್ನು ಪ್ರಾಮಾಣಿಕವಾಗಿ ಸತ್ಯ ಹೇಳುವಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿ ವಿಫಲರಾಗಿದ್ದಾರೆ. ನಿಜಾಂಶ ಹೇಳಲು ಎಲ್ಲರೂ ಹಿಂದೇಟು ಹಾಕಿದ್ದು, ಸತ್ಯ ಮರೆಮಾಚಲು ಸಂಪೂರ್ಣವಾಗಿ ಪ್ರಯತ್ನಿಸಿರುವುದು ಕಂಡು ಬರುತ್ತದೆ.
* ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಇತರರು ಭಾಗವಹಿಸಿದ್ದು, ಅವರ ಹೆಸರು, ಭೇಟಿ ಉದ್ದೇಶ, ಒಳಗಡೆ ಬಂದ– ಹೊರಗಡೆ ಹೋದ ಸಮಯ, ಸಂಪರ್ಕ ಸಂಖ್ಯೆ, ಇತರೆ ವಿವರಗಳು ಯಾವುದೇ ದಾಖಲೆಗಳಲ್ಲಿ ಇಲ್ಲ. ಯಾವುದೇ ಚಲನವಲನ ವಹಿಗಳನ್ನು ನಿರ್ವಹಿಸಿರುವುದಿಲ್ಲ. ಶಾಮಿಯಾನ, ಮೈಕ್ ಸೆಟ್ ಹಾಕಿದವರು, ಅಧಿಕಾರಿಗಳ ಕಾರು ಚಾಲಕರು, ಪಟಾಕಿ ಕೊಟ್ಟವರು, ಸಿಹಿ ತಂದವರು, ಇತರರ ವಿವರಗಳು ದಾಖಲಾಗಿರುವುದು ಕಂಡು ಬಂದಿಲ್ಲ.
* ನವೆಂಬರ್ 16ರಂದು ಸಂಜೆ 6.30ರಿಂದ 7.30ರ ಒಳಗೆ ಕಾರ್ಯಕ್ರಮ ಪೂರ್ಣಗೊಂಡಿದೆ ಎಂದು ಭಾಗವಹಿಸಿದ್ದ ಅಧಿಕಾರಿಗಳು ಹೇಳುತ್ತಾರೆ. ಆದರೆ ಅಂದಿನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತ್ರ ರಾತ್ರಿ 8.45ಕ್ಕೆ ಕಾರ್ಯಕ್ರಮ ಮುಕ್ತಾಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಮಯದ ಬಗ್ಗೆಯೂ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಾರೆ. ಇದು ನಿಜವಾಗಿ ಯಾವ ಉದ್ದೇಶದಿಂದ ಮಾಡಿರುವ ಕಾರ್ಯಕ್ರಮ? ಎಂಬ ಸತ್ಯವನ್ನು ಮರೆಮಾಚಿರುವುದು ಕಂಡುಬರುತ್ತದೆ.
* 18 ವರ್ಷದೊಳಗಿನ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ನಲ್ಲಿ ಯಾವುದೇ ರಕ್ಷಣಾ ನಿಯಮ, ಶಿಷ್ಟಾಚಾರ, ಕ್ರಮಬದ್ಧತೆ ಪಾಲನೆಯಾಗಿಲ್ಲ. ಕೆಲವು ಖಾಸಗಿ ದೃಶ್ಯ ಮಾಧ್ಯಮದವರು ಕಾರ್ಯಕ್ರಮ ಚಿತ್ರೀಕರಿಸಿ, ಮಕ್ಕಳನ್ನು ಮಾತನಾಡಿಸಿ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಅಧಿಕಾರಿಗಳಿಗೆ ನಿಯಮ, ಕಾನೂನಿನ ಬಗ್ಗೆ ಸ್ವಲ್ಪವೂ ಅರಿವಿನ ಜ್ಞಾನ ಇಲ್ಲವಾಗಿದೆ. ಇದೆಲ್ಲವನ್ನು ಗಮನಿಸಿದರೆ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಕ್ಕು, ಘನತೆ, ಗುರುತು, ಸ್ವಾತಂತ್ರ್ಯ, ಗೌಪ್ಯತೆ, ನಂಬಿಕೆಗೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
* ರಾಜ್ಯ ಸರ್ಕಾರವು 2016ರಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯನ್ನು ಜಾರಿಗೆ ತಂದಿದೆ. ಈ ನಿಯಮ 18 ವರ್ಷದೊಳಗಿನ ಮಕ್ಕಳಿರುವ ಎಲ್ಲಾ ಶಾಲೆ, ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ಹೇಳಿ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಈ ಹಾಸ್ಟೆಲ್‌ನಲ್ಲಿ ನಿಯಮದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಗೊತ್ತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.