ತುಮಕೂರು: ಕನಿಷ್ಠ ವೇತನ, ವಾರದ ರಜೆ, ಸೇವಾ ಭದ್ರತೆಗೆ ಒತ್ತಾಯಿಸಿ ಹಾಸ್ಟೆಲ್ ಮತ್ತು ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
‘20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದೇವೆ. ಅಡುಗೆ ಸಹಾಯಕರು, ಸ್ವಚ್ಛತೆ ಕೆಲಸಗಾರರು, ಕಾವಲುಗಾರರು, ಡಿ–ಗ್ರೂಪ್ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್‌ಗಳಿಗೆ ಕನಿಷ್ಠ ವೇತನ ಸೇರಿ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ವಾರ್ಡನ್, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರ ಗುತ್ತಿಗೆ ಸಿಬ್ಬಂದಿಗೆ ಶೋಷಣೆ ಮಾಡುತ್ತಿದ್ದಾರೆ’ ಎಂದು ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ‘ಕನಿಷ್ಠ ₹31 ಸಾವಿರ ವೇತನ ನಿಗದಿಪಡಿಸಬೇಕು. ಕಾರ್ಮಿಕ ಇಲಾಖೆಯ ಕಾನೂನು ಪ್ರಕಾರ ವಾರದ ರಜೆ, ಕೆಲಸದ ಸಮಯ ನಿಗದಿಪಡಿಸಬೇಕು. ಯಾರ ವೇತನವನ್ನೂ ಕಡಿತ ಮಾಡಬಾರದು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೇಶ್, ‘ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐ.ಡಿ ಕಾರ್ಡ್, ಇಎಸ್‌ಐ, ಪಿಎಫ್ ಹಣ ತುಂಬಿದ ರಸೀದಿ ಕೊಡಬೇಕು. ಪ್ರತಿ ತಿಂಗಳು 5ರ ಒಳಗೆ ಸಂಬಳ ಪಾವತಿಸಬೇಕು. ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡ ನಾಗರಾಜು, ‘50 ವಿದ್ಯಾರ್ಥಿಗಳಿಗೆ 3 ಜನ ಸಿಬ್ಬಂದಿ ನೇಮಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು. ವಸತಿ ನಿಲಯ ಮತ್ತು ಹಾಸ್ಟೆಲ್‍ಗಳಿಗೆ ಬೇಕಾದ ಆಹಾರ ಸಾಮಗ್ರಿ ಸರಿಯಾದ ಪ್ರಮಾಣದಲ್ಲಿ ಪೂರೈಸಬೇಕು’ ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ರಂಗಮ್ಮ, ರಾಧಾ, ಮಹೇಶ್, ಮೊಹನ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವನಾಂದ ಬಿ.ಕರಾಳೆ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.