ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಲ ಪ್ರದೇಶ ಗುಡ್ಡಗಳಿಂದ ಕೂಡಿದೆ. ಜನವರಿ ಬಂದರೆ ಸಾಕು ಬಹುತೇಕ ಗುಡ್ಡಗಳು ಹೊತ್ತಿ ಉರಿಯುತ್ತವೆ.
ತಾಲ್ಲೂಕಿನ ಮದಲಿಂಗನ ಕಣಿವೆಯ ಗುಡ್ಡಗಳಿಂದ ಹಿಡಿದು ಬೋರನಕಣಿವೆ ಜಲಾಶಯ ಮಾರ್ಗವಾಗಿ ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕುಗಳ ಗಡಿ ಭಾಗದವರೆಗೆ ಗುಡ್ಡಗಳ ಸಾಲು ಇದೆ. ಈ ಮಾರ್ಗದಲ್ಲಿ ನೂರಾರು ಗುಡ್ಡಗಳಿದ್ದು ಪ್ರತಿ ವರ್ಷ ಬೇಸಿಗೆ ಬಂತೆಂದರೆ ಸಾಕು ಬೆಂಕಿಗೆ ಆಹುತಿಯಾಗುತ್ತಿವೆ.
ಬೆಂಕಿಯಿಂದ ಸಾವಿರಾರು ಸಸ್ಯ ಪ್ರಬೇಧಗಳು, ನೂರಾರು ಸಣ್ಣ ಪುಟ್ಟ ಜಾತಿಯ ಕಾಡುಪ್ರಾಣಿಗಳು, ಸರಿಸೃಪಗಳು ಬೆಂಕಿಯಲ್ಲಿ ಬೆಂದು ಹೋಗುತ್ತಿವೆ. ಇವುಗಳ ಜತೆ ಅರಣ್ಯ ಇಲಾಖೆಯ ಮರಗಳು, ಪ್ರತಿ ವರ್ಷ ನೆಡುತ್ತಿರುವ ಸಸಿಗಳು ಬೆಂಕಿಯಲ್ಲಿ ನಲುಗಿ ಹೋಗುತ್ತಿವೆ. ಇನ್ನೂ ಬಾದೆ ಹುಲ್ಲುಗಾವಲು ಸಂಪೂರ್ಣ ಸುಟ್ಟು ಕರಕಲಾಗುತ್ತಿದೆ. ಗುಡ್ಡಗಳಿಗೆ ಇಡುವ ಬೆಂಕಿಯಿಂದ ಕಾಡಂಚಿನ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವ ರೈತರ ಮನೆಗಳು ಸಹ ಬೆಂಕಿಗೆ ನಾಶವಾಗುವ ಸಾಧ್ಯತೆ ದಟ್ಟವಾಗಿವೆ.
ಮಂಗಳೂರು- ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಶಿರಾ-ಹುಳಿಯಾರು ರಸ್ತೆ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟಿರುವ ಮಹಾಘನಿ, ಆಲ, ಅರಳಿ ಸೇರಿದಂತೆ ವಿವಿಧ ಜಾತಿಯ ಗಿಡಗಳು ಕಳೆದ ವರ್ಷ ಸುಟ್ಟು ಹೋಗಿದ್ದವು.
ಬೆಂಕಿಯಿಡುವ ಪರಿಪಾಠ: ಗುಡ್ಡಗಳಿಗೆ ಬೆಂಕಿಯಿಡುವ ಪರಿಪಾಠ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಗುಡ್ಡಗಳಲ್ಲಿನ ಬಾದೆ ಹುಲ್ಲು ಮುಂಗಾರು ಮಳೆ ಬಿದ್ದ ತಕ್ಷಣ ಹುಲುಸಾಗಿ ಚಿಗುರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಕುರಿಗಾಹಿಗಳು ಬೆಂಕಿಯಿಡುತ್ತಾರೆ. ಗುಡ್ಡಗಳಿಗೆ ಶಿಕಾರಿಗೆ ಹೋಗುವ ಬೇಟೆಗಾರರು, ಗುಡ್ಡಗಳ ಪಕ್ಕ ರಸ್ತೆಯಿದ್ದು ಜನರು ಸಂಚರಿಸುವ ವೇಳೆ ಬೀಡಿ ಅಥವಾ ಸಿಗರೇಟ್ ಸೇದಲು ಹಚ್ಚಿದ ಬೆಂಕಿಕಡ್ಡಿಯನ್ನು ಹಾಗೆಯೇ ಎಸೆಯುವುದರಿಂದಲೂ ಅವಘಡಗಳು ಸಂಭವಿಸುತ್ತಿವೆ. ಗುಡ್ಡಗಳ ಸಮೀಪ ಕೃಷಿ ಭೂಮಿ ಹೊಂದಿರುವ ರೈತರು ಜಮೀನು ಒತ್ತವರಿಗೆ ಹಾಗೂ ಕಾಡುಪ್ರಾಣಿಗಳು ಜಮೀನಿಗೆ ಬಾರದಂತೆ ಹಾಕುವ ಬೆಂಕಿಯಿಂದಲೂ ಗುಡ್ಡಗಳಿಗೆ ಬೆಂಕಿ ಬೀಳುತ್ತದೆ ಎನ್ನಲಾಗುತ್ತಿದೆ.
ಪ್ರತಿ ವರ್ಷ ಬೆಂಕಿಗೆ ಸಿಲುಕಿದ ಮರಗಳು ಕುರುಚಲು ಗಿಡಗಳಾಗಿ ಪರಿವರ್ತನೆಯಾದರೆ ಇನ್ನೂ ಕೆಲವು ಮರಗಳು ಮೈತುಂಬಾ ಸುಟ್ಟ ಗಾಯದಿಂದ ತತ್ತರಿಸಿ ಹೋಗಿವೆ.
ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ ಕಳ್ಳಬೇಟೆ ನಿಗ್ರಹ ದಳದ ಕ್ಯಾಂಪ್ ಸ್ಥಾಪಿಸಲಾಗಿದೆ. ಗುಡ್ಡದ ಎತ್ತರ ಪ್ರದೇಶದಲ್ಲಿ ಕಟ್ಟಡ ಇರುವುದರಿಂದ ಅಲ್ಲಿಗೆ ಕಾವಲುಗಾರರನ್ನು ಅರಣ್ಯ ಇಲಾಖೆ ನೇಮಿಸಿ ಬೆಂಕಿ ಬೀಳುವ ಪ್ರದೇಶವನ್ನು ಗುರ್ತಿಸಬಹುದಾಗಿದೆ. ವಿವಿಧ ಮಾರ್ಗಗಳನ್ನು ಅನುಸರಿಸಿ ಬೆಂಕಿ ಅನಾಹುತ ತಪ್ಪಿಸುವ ಕೆಲಸ ಇಲಾಖೆ ಶ್ರಮಿಸಬೇಕು ಎನ್ನುವುದು ಪರಿಸರಾಸಕ್ತರ ಒತ್ತಾಯ.
ಬೆಂಕಿ ಇಡುವವರು ಒಮ್ಮೊಮ್ಮೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದರೂ ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸದಿರುವುದು ಗುಡ್ಡಗಳಿಗೆ ಬೆಂಕಿ ಹಚ್ಚುವವರಿಗೆ ಇಂಬು ನೀಡಿದಂತಾಗಿದೆಮಹಮದ್ ಹುಸೇನ್ ಚಿಕ್ಕನಾಯಕನಹಳ್ಳಿ
ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿ ನೆಟ್ಟಿದ್ದ ಸಾಲು ಗಿಡಗಳು ಕಳೆದ ವರ್ಷ ಬೆಂಕಿಗೆ ಆಹುತಿಯಾಗಿದ್ದವು. ಅರಣ್ಯ ಇಲಾಖೆ ಗಿಡಗಳ ಸುತ್ತ ಬೆಳೆದಿರುವ ಹುಲ್ಲು ತೆರವುಗೊಳಿಸಿ ಮುಂದೆ ಸಂಭವಿಸುವ ಬೆಂಕಿ ಅನಾಹುತ ತಪ್ಪಿಸಬೇಕುಡಿ.ಯೋಗೀಶ್ ಕಂಪನಹಳ್ಳಿ ತೋಟದಮನೆ
ಗುಡ್ಡಗಳಿಗೆ ಬೆಂಕಿಯಿಡುವ ಸಂಸ್ಕೃತಿಯಿಂದ ತೊಂದರೆಯಾಗುತ್ತಿದೆ. ಸರ್ಕಾರ ವಿಮಾನಗಳ ಮೂಲಕ ನೀರು ಸುರಿದು ಬೆಂಕಿ ನಂದಿಸುವ ಯೋಜನೆ ಅಳವಡಿಸಿದರೆ ಹೆಚ್ಚು ಪರಿಣಾಮಕಾರಿಬಿ.ಎನ್.ಲೋಕೇಶ್ ಬಡಕೇಗುಡ್ಲು
ಈ ಬಾರಿ ಸೆಪ್ಟಂಬರ್ ಅಕ್ಟೋಬರ್ ತಿಂಗಳಲ್ಲಿಯೇ ಕೆಲ ಗುಡ್ಡಗಳು ಹೊತ್ತಿ ಉರಿದವು. ಪರಿಸರಾಸಕ್ತರು ಹಾಗೂ ಅರಣ್ಯ ಇಲಾಖೆ ಗುಡ್ಡಗಾಡುಗಳ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಬೆಂಕಿಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಬೇಕುರಾಮಕೃಷ್ಣಪ್ಪ ನಿವೃತ್ತ ಶಿಕ್ಷಕ ಯಗಚಿಹಳ್ಳಿ
ಚಿಕ್ಕನಾಯಕನಹಳ್ಳಿ ಮದಲಿಂಗನ ಕಣಿವೆ ಸುಂದರ ಪರಿಸರ ತಾಣವಾಗಿದ್ದು ಹೆಚ್ಚು ಜನರು ಸಂಚರಿಸುತ್ತಾರೆ. ಈ ವೇಳೆ ಸಾರ್ವಜನಿಕರು ಬೆಂಕಿ ಅವಘಡಗಳಿಗೆ ಅಸ್ಪದ ನೀಡಬಾರದುಬೆಳುಗುಲಿ ಶಶಿಭೂಷಣ್ ಉಪನ್ಯಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.