ADVERTISEMENT

ಮಕ್ಕಳ ಪ್ರತಿಭೆಯನ್ನು ಗುರುತಿಸಿ: ಡಾ.ಆರ್‌.ಗಿರಿಜಾ

ನಗರದ ಉಪ್ಪಾರಹಳ್ಳಿಯ ಜ್ಞಾನ ವಿಹಾರ ಸಭಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 15:16 IST
Last Updated 3 ಏಪ್ರಿಲ್ 2019, 15:16 IST
ಬೆಂಗಳೂರಿನ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದ ಡಾ.ಕೆ.ಎಚ್.ಪ್ರಭು, ವಿಜ್ಞಾನ ಶಿಕ್ಷಕಿ ವಾಣಿ ಒಲಿಂಪಿಯಾಡ್‌ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು
ಬೆಂಗಳೂರಿನ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದ ಡಾ.ಕೆ.ಎಚ್.ಪ್ರಭು, ವಿಜ್ಞಾನ ಶಿಕ್ಷಕಿ ವಾಣಿ ಒಲಿಂಪಿಯಾಡ್‌ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು   

ತುಮಕೂರು: ಮಕ್ಕಳ ಆಸಕ್ತಿಯ ಕ್ಷೇತ್ರ ಸಾಮರ್ಥ್ಯವನ್ನು ಅರಿತು ಅವರ ಸಾಧನೆಗೆ ಪ್ರೋತ್ಸಾಹ ನೀಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದು ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯದ ಪ್ರೊ.ಡಾ.ಆರ್‌.ಗಿರಿಜಾ ತಿಳಿಸಿದರು.

ನಗರದ ಉಪ್ಪಾರಹಳ್ಳಿಯ ಜ್ಞಾನ ವಿಹಾರ ಸಭಾಂಗಣದಲ್ಲಿ ವಿಜ್ಞಾನ ಬಿಂದು ಸಂಸ್ಥೆಯು ಕಿಡ್ಸ್‌ ಪ್ರಿ ಸ್ಕೂಲ್‌ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಗಣಿತ ಒಲಿಂಪಿಯಾಡ್‌ ಮತ್ತು ವಿಜ್ಞಾನ ಪ್ರತಿಭಾ ಅನ್ವೇಷಣಾ ಪರೀಕ್ಷೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಪೋಷಕರು ತಮ್ಮ ಆಸೆ, ಆಕಾಂಕ್ಷೆ ಮತ್ತು ಅಪೇಕ್ಷೆಗಳನ್ನು ಮಕ್ಕಳಿಂದ ನಿರೀಕ್ಷಿಸುವುದಕ್ಕಿಂತ, ಮಕ್ಕಳ ಅಪೇಕ್ಷೆಗಳೇನು ಎಂಬುದನ್ನು ತಾವೇ ಮೊದಲು ನಿರೀಕ್ಷಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಾಲಾ ಶಿಕ್ಷಣದಲ್ಲಿ ವಿಜ್ಞಾನ ಮತ್ತು ಗಣಿತ ಕಲಿಕೆ ಸಾಮಾನ್ಯ ವಿಷಯಗಳಾಗಿದ್ದು, ಮಕ್ಕಳಿಂದ ಅತಿಯಾದ ಒತ್ತಡವನ್ನೇನೂ ನಿರೀಕ್ಷಿಸುವುದಿಲ್ಲ. ದಿನ ನಿತ್ಯದ ಪರಿಸರದಲ್ಲಿನ ಸಾಮಾನ್ಯ ಸಂಗತಿಗಳು ಮತ್ತು ಲೆಕ್ಕಾಚಾರಗಳ ಬಗ್ಗೆ ಸ್ವಲ್ಪ ಪ್ರಾಯೋಗಿಕ ಜ್ಞಾನವನ್ನು ನೀಡಿದರೆ ವಿಜ್ಞಾನ ಮತ್ತು ಗಣಿತ ಕಲಿಕೆ ಅತಿ ಸುಲಭವೂ ಮತ್ತು ಮನರಂಜನಾತ್ಮಕವೂ ಆಗಲಿದೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರೊ.ಡಾ.ಕೆ.ಎಲ್.ಎನ್.ಮೂರ್ತಿ ಅವರು, ‘ಸಮಾಜದ ಬೆಳವಣಿಗೆಗೆ ವಾಣಿಜ್ಯ, ವ್ಯವಹಾರ, ಆಡಳಿತ, ಅಧ್ಯಯನ, ಸಂಶೋಧನೆ, ಕಲೆ, ಭಾಷೆ, ಸಂವಹನ, ಮಾಧ್ಯಮ ಕ್ಷೇತ್ರಗಳು ಅತ್ಯಂತ ಗಮನಾರ್ಹವಾದ ಕೊಡುಗೆಗಳನ್ನು ನೀಡುತ್ತಿವೆ’ ಎಂದರು.

ವಿಜ್ಞಾನ ಬಿಂದು ಸಂಸ್ಥೆಯ ಚಿಲ್ಡ್ರನ್ಸ್ ಕ್ಲಬ್ ಅಧ್ಯಕ್ಷೆ ಚಿನ್ಮಯಿ ಸ್ವಾಮಿ ಅವರು ಒಲಂಪಿಯಾಡ್ ವಿಜೇತರಾದ 38 ವಿದ್ಯಾರ್ಥಿಗಳಿಗೆ ಚಿಲ್ಡ್ರನ್ಸ್ ಕ್ಲಬ್‌ಗೆ ಒಂದು ವರ್ಷದ ಉಚಿತ ಸದಸ್ಯತ್ವವನ್ನು ನೀಡಿದರು. ಕಾರ್ಯಕ್ರಮ ಸಂಯೋಜಕ ಎಸ್ ರವಿಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.