ಕೊಡಿಗೇನಹಳ್ಳಿ ಹೋಬಳಿ ಅಡವಿನಾಗೇನಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಇತ್ತೀಚೆಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು
ಕೊಡಿಗೇನಹಳ್ಳಿ: ಗ್ರಾಮಗಳ ಬಹುತೇಕ ಕಿರಾಣಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ. ಯುವ ಜನರು ಕುಡಿತದ ದಾಸರಾಗುತ್ತಿದ್ದು ಕೌಟುಂಬಿಕ, ಸಾಮಾಜಿಕ, ಆರ್ಥಿಕ ಕಲಹಗಳಿಗೆ ಕಾರಣವಾಗುತ್ತಿದೆ.
ಕೊಡಿಗೇನಹಳ್ಳಿ, ಪುರವರ ಹಾಗೂ ಐಡಿಹಳ್ಳಿ ಹೋಬಳಿಗಳು ಕೈಗಾರಿಕೆ, ಶಾಶ್ವತ ನೀರಾವರಿ ಯೋಜನೆ ಇಲ್ಲದೆ, ಆರ್ಥಿಕವಾಗಿ ಹಿಂದುಳಿದಿದೆ. ಹಿಂದೆ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಗಳು ಸದ್ಯ ನೀರು, ಕೂಲಿಯಾಳುಗಳ ಸಮಸ್ಯೆ, ರೋಗಭಾದೆ ಮೊದಲಾದ ಕಾರಣಗಳಿಂದಾಗಿ ಕೃಷಿಯಿಂದ ದೂರು ಉಳಿಯುತ್ತಿವೆ. ಕೂಲಿ ಮಾಡಿ ಬರುವ ಹಣವನ್ನೂ ಮದ್ಯಕ್ಕೆ ವ್ಯಯಿಸುತ್ತಿದ್ದಾರೆ ಎಂಬ ಆತಂಕ ಮನೆಮಾಡಿದೆ.
ಬಾರ್‌ಗಳಿಂದ ಕೆಲವರು ಮದ್ಯದ ಬಾಕ್ಸ್‌ಗಳನ್ನು ಸ್ವತಃ ಕಿರಾಣಿ ಅಂಗಡಿಗಳಿಗೆ ತಲುಪಿಸುತ್ತಿದ್ದಾರೆ. ಸ್ಥಳೀಯರು ಸಾಲ ಮಾಡಿ, ಗಲಾಟೆ ಮಾಡಿ ಕೊನೆಗೆ ಎಲ್ಲೂ ಹಣ ಸಿಗದಿದ್ದರೆ ಮನೆಯಲ್ಲಿನ ಕೆಲ ವಸ್ತುಗಳನ್ನು ಮಾರಿಯಾದರೂ ಕುಡಿಯುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲದಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಹಳ್ಳಿಗಳಲ್ಲಿಯೇ ಮದ್ಯ ವ್ಯಾಪಕವಾಗಿ ಲಭ್ಯವಿರುವ ಪರಿಣಾಮ ಹಲವರು ಬೆಳಿಗ್ಗೆ ಎದ್ದು ಕಾಫಿ ಕುಡಿಯುವ ಬದಲು ಮದ್ಯದ ಮೊರೆ ಹೋಗುತ್ತಿದ್ದಾರೆ. ಹಲವು ಕುಟುಂಬಗಳು ಕೌಟುಂಬಿಕ ಕಲಹಗಳಿಂದ ಬೀದಿ ಪಾಲಾಗುತ್ತಿದ್ದರೆ ಎಂದು ಆರೋಪಿಸಿ ಇತ್ತೀಚೆಗೆ ಕೊಡಿಗೇನಹಳ್ಳಿ ಹೋಬಳಿ ಅಡವಿನಾಗೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ಈ ಭಾಗದಲ್ಲಿ ಪರಿಶಿಷ್ಟರು ಹಾಗೂ ಹಿಂದುಳಿದವರೇ ಹೆಚ್ಚಾಗಿರುವುದರ ಜೊತೆಗೆ ಜೀವನಕ್ಕೆ ಯಾವುದೇ ಆಸರೆ ಇಲ್ಲದೆ ಹಲವು ಕುಟುಂಬಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿವೆ. ಬರುವ ಅಲ್ಪ ಆದಾಯವನ್ನೂ ಕುಡಿತಕ್ಕೆ ಖರ್ಚು ಮಾಡಿದರೆ ಜೀವನ ಸಾಗಿಸುವುದು ಹೇಗೆ. ಕುಡಿದ ಮತ್ತಿನಲ್ಲಿ ಗಲಾಟೆ ಮತ್ತು ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸಿದ ನಿದರ್ಶನಗಳಿವೆ. ಸಂಬಂಧಿಸಿದವರು ಸರ್ಕಾರದ ಆದಾಯದ ಬಗ್ಗೆ ಯೋಚಿಸದೆ ಸಾಮಾಜಿಕ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ಜಿ.ನರಸಿಂಹಯ್ಯ
ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಕಂಟಕಪ್ರಾಯರಾಗುತ್ತಿದ್ದಾರೆ. ನೈತಿಕ ಮೌಲ್ಯ ಮರೆಯುತ್ತಿದ್ದಾರೆ.ಜಿ.ನರಸಿಂಹಯ್ಯ, ತೆರಿಯೂರು
ಮೂರ್ತಿ
ಮದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಪರಿಣಾಮ ಶಾಲೆ ಬಿಟ್ಟ ಕೆಲ ಮಕ್ಕಳು ಕೂಡ ಮದ್ಯ ಕುಡಿಯುವುದನ್ನು ಕಲಿಯುತ್ತಿರುವುದು ಆತಂಕದ ಸಂಗತಿ.ಮೂರ್ತಿ, ಅಡವಿನಾಗೇನಹಳ್ಳಿ
ವೆಂಕಟೇಶ್
ಗ್ರಾಮೀಣ ಭಾಗದಲ್ಲಿ ಇಂದು ಕೆಲ ಯುವಕರು ಹುಟ್ಟಿದ ಹಬ್ಬ ಹಾಗೂ ಇತರೆ ಕಾರ್ಯಕ್ರಮಗಳ ನೆಪದಲ್ಲಿ ಪಾರ್ಟಿ ಮಾಡಿಕೊಂಡು ಮದ್ಯ ಹಾಗೂ ಇತರೆ ದುಶ್ಚಟಗಳತ್ತ ವಾಲುತ್ತಿದ್ದು, ಪೋಷಕರು ಎಚ್ಚರವಹಿಸಬೇಕು.ವೆಂಕಟೇಶ್, ರೆಡ್ಡಿಹಳ್ಳಿ
ತಾಲ್ಲೂಕಿನ ಗ್ರಾಮಗಳಲ್ಲಿ ಎಲ್ಲೆಲ್ಲಿ ದೂರುಗಳು ಬಂದಿವೆಯೊ ಅಲ್ಲೆಲ್ಲ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇತರೆಡೆ ಕೂಡ ನಮ್ಮ ಸಿಬ್ಬಂದಿ ಜೊತೆ ಭೇಟಿ ನೀಡುತ್ತಿದ್ದು, ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.ದೀಪಕ್,ಅಬಕಾರಿ ಡಿವೈಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.