ಶಿರಾ: ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಎರಡು ಪ್ರಮುಖ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಯಿತು.
ನಗರದ ಪಾರ್ಕ್ ಮೊಹಲ್ಲಾದ ನಿವಾಸಿ ಆಂಧ್ರಪ್ರದೇಶದ ಹಿಂದೂಪುರಕ್ಕೆ ಹೋಗಿ ಬಂದಿದ್ದು ಶಿರಾಕ್ಕೆ ಕಂಟಕವಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕವೂ ಹೆಚ್ಚಾಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 6ಮಂದಿಗೆ ಹಾಗೂ ದ್ವಿತೀಯ ಸಂಪರ್ಕ ದಲ್ಲಿದ್ದ ಒಬ್ಬರು ಸೇರಿದಂತೆ 7 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದೆ.
ನಗರದ ಪಾರ್ಕ್ ಮೊಹಲ್ಲಾ, ಗೌಳಿಗರ ಹಟ್ಟಿ, ಕಚೇರಿ ಮೊಹಲ್ಲಾಗಳನ್ನು ಈಗಾಗಲೇ ಸೀಲ್‌ಡೌನ್ ಮಾಡಲಾಗಿದೆ.
ಬುಧವಾರ ನಗರದ ಖಾಸಗಿ ಬಸ್ ನಿಲ್ದಾಣದ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ಆರ್.ಟಿ.ರಸ್ತೆಯನ್ನು ಸಹ ಸೀಲ್‌ಡೌನ್ ಮಾಡಲಾಗಿದೆ. ನಗರದಲ್ಲಿ ಈ ಎರಡು ರಸ್ತೆಗಳು ಸದಾ ಜನದಟ್ಟಣೆಯಿಂದ ಕೂಡಿದ್ದು, ಪ್ರಮುಖ ಅಂಗಡಿ ಮಳಿಗೆಗಳಿದ್ದು, ವಾಣಿಜ್ಯ ವಹಿವಾಟು ನಡೆಯುತ್ತದೆ.
ಸೀಲ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದರು. ತಾಲ್ಲೂಕು ಆಡಳಿತ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿಸಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ನಗರದ ಖಾಸಗಿ ಬಸ್ ನಿಲ್ದಾಣದಿಂದ ವಿದ್ಯಾಗಣಪತಿ ದೇವಸ್ಥಾನದವರೆಗೆ ಹಾಗೂ ಆರ್.ಟಿ.ರಸ್ತೆಯಲ್ಲಿ ರಾಘವೇಂದ್ರಸ್ವಾಮಿ ದೇವಾಲಯದಿಂದ ಪಾಂಡುರಂಗಸ್ವಾಮಿ ದೇವಾಲಯದವರೆಗಿನ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ತಪಾಸಣೆ ನಡೆಸಿದ್ದು ಅವರಿಗೂ ಪಾಸಿಟಿವ್ ಬರುವ ನಿರೀಕ್ಷೆ ಇರುವುದರಿಂದ ಸೀಲ್‌ಡೌನ್ ಕಠಿಣಗೊಳಿಸಲಾಗಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.