ತುಮಕೂರು: ಗ್ರಾಮೀಣ ಭಾಗದಲ್ಲಿ ಕೆಲವು ದಿನಗಳಿಂದ ಹಸು–ಕರುಗಳ ಕಳ್ಳತನ ಹೆಚ್ಚಾಗಿದೆ. ದನದ ಕೊಟ್ಟಿಗೆ, ಮನೆಯ ಹತ್ತಿರದ ಮರಕ್ಕೆ ಕಟ್ಟಿದ್ದ ಹಸುಗಳು ರಾತ್ರೋರಾತ್ರಿ ಕಣ್ಮರೆಯಾಗುತ್ತಿವೆ.
ಬೆಳ್ಳಾವಿ, ಗೂಳೂರು, ಹೆಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಸಾರ್ವಜನಿಕರು ಭಯದಲ್ಲಿ ದಿನ ದೂಡುತ್ತಿದ್ದಾರೆ. ಎಲ್ಲರು ಮಲಗಿದ್ದ ಸಮಯ ನೋಡಿಕೊಂಡು ಹಸುಗಳನ್ನು ವಾಹನಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ತಾಲ್ಲೂಕಿನ ಹೊಳಕಲ್ಲು ಗ್ರಾಮದಲ್ಲಿ ಏ.24ರಂದು ಬೆಳಗಿನ ಜಾವ 3 ಸೀಮೆ ಹಸು, ಒಂದು ಕರು ಕಳ್ಳತನವಾಗಿದೆ.
ಗ್ರಾಮದ ಎಚ್.ಎನ್.ಕೃಷ್ಣ ಅವರ ತಾಯಿ ಏ.23ರಂದು ರಾತ್ರಿ ದನದ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿ, ಚಿಲಕ ಹಾಕಿಕೊಂಡು ಬಂದಿದ್ದರು. ಮಾರನೇ ದಿನ ಕೃಷ್ಣ ಕೊಟ್ಟಿಗೆಗೆ ಹೋಗಿ ನೋಡಿದಾಗ ಹಸುಗಳು ಕಾಣಿಸಿಲ್ಲ. ಕೊಟ್ಟಿಗೆ ಮೇಲ್ಛಾವಣಿಯ ಹೆಂಚು ತೆಗೆದು ಒಳಗೆ ನುಗ್ಗಿದ ಕಳ್ಳರು ಹಸುಗಳನ್ನು ಬಿಡಿಸಿಕೊಂಡು ಟೆಂಪೊದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಕೊಟ್ಟಿಗೆ ಮುಂದೆ ಟೆಂಪೊದ ಟೈರ್ ಮಾರ್ಕ್ ಕಾಣಿಸಿದೆ. ಈ ಬಗ್ಗೆ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಗೂ ಒಂದು ದಿನ ಮುಂಚಿತವಾಗಿ ಏ.23ರಂದು ಬೆಳಗಿನ ಜಾವ ಬೆಳ್ಳಾವಿ ಹೋಬಳಿಯ ಬಳ್ಳಾಪುರದಲ್ಲಿ ಹುಣಸೆ ಮರಕ್ಕೆ ಕಟ್ಟಿದ್ದ 3 ಸೀಮೆ ಹಸುಗಳು ಕಾಣೆಯಾಗಿವೆ. ಸುಮಿತ್ರಾ ಎಂಬುವರು ಏ.22ರಂದು ರಾತ್ರಿ ತಮ್ಮ ಮನೆಯ ಪಕ್ಕದ ಮರಕ್ಕೆ ಹಸುಗಳನ್ನು ಕಟ್ಟಿದ್ದರು. 23ರ ಬೆಳಗಿನ ಜಾವ ಬಂದು ನೋಡಿದಾಗ ಹಸು ಕಾಣಿಸಿಲ್ಲ. ಎಲ್ಲ ಹುಡುಕಾಡಿದ ನಂತರ ಬೆಳ್ಳಾವಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.