ADVERTISEMENT

ಹೆಚ್ಚುತ್ತಿದೆ ಕೊರೊನಾ ಸೋಂಕು

ಮತ್ತೆ 328 ಮಂದಿಗೆ ಸೋಂಕು, 6 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 7:52 IST
Last Updated 14 ಸೆಪ್ಟೆಂಬರ್ 2020, 7:52 IST
ಪಾವಗಡ ತಹಶೀಲ್ದಾರ್, ಸಿಬ್ಬಂದಿಗೆ ಕೋವಿಡ್– 19 ದೃಢಪಟ್ಟ ಕಾರಣ ಕಚೇರಿಯನ್ನು ಕಂಟೈನ್‌ಮೆಂಟ್ ಜೋನ್ ಮಾಡಲಾಗಿದೆ
ಪಾವಗಡ ತಹಶೀಲ್ದಾರ್, ಸಿಬ್ಬಂದಿಗೆ ಕೋವಿಡ್– 19 ದೃಢಪಟ್ಟ ಕಾರಣ ಕಚೇರಿಯನ್ನು ಕಂಟೈನ್‌ಮೆಂಟ್ ಜೋನ್ ಮಾಡಲಾಗಿದೆ   

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವ ವೃದ್ಧರ ಸಂಖ್ಯೆ ಮುಂದುವರಿದಿದೆ. ಭಾನುವಾರ ನಾಲ್ಕು ಮಂದಿ ವೃದ್ಧರು ಸೇರಿದಂತೆ 6 ಮಂದಿ ಮೃತಪಟ್ಟಿದ್ದು 328 ಮಂದಿಗೆ ಸೋಂಕು ತಗುಲಿದೆ.

ಮಾರ್ಚ್‌ನಲ್ಲಿ ಮೊದಲ ಸೋಂಕಿನ ಪ್ರಕರಣ ಕಂಡು ಬಂದಿದ್ದು, ಆಗಸ್ಟ್ 13ರ ವೇಳೆಗೆ 3,003 ಮಂದಿಗೆ ಸೋಂಕು ತಗುಲಿತ್ತು. ನಂತರ ಒಂದು ತಿಂಗಳಲ್ಲಿ ಇದರ ಮೂರು ಪಟ್ಟು ಜನರಿಗೆ ಸೋಂಕು ತಗುಲಿದೆ.

ತುಮಕೂರಿನ ಉಪ್ಪಾರಹಳ್ಳಿಯ 53 ವರ್ಷದ ಪುರುಷ, ತುಮಕೂರು ತಾಲ್ಲೂಕು ಹೊನ್ನುಡಿಕೆ ಗ್ರಾಮದ 62 ವರ್ಷದ ಪುರುಷ, ಸೋರೆಗುಂಟೆ ಗ್ರಾಮದ 42 ವರ್ಷ ಪುರುಷ, ಪಾವಗಡ ನಗರ ರೈನ್‌ಗೇಜ್‌ ಬಡಾವಣೆಯ 72 ವರ್ಷದ ಪುರುಷ, ಶ್ರೀನಿವಾಸ ಬಡಾವಣೆಯ 72 ವರ್ಷದ ಮಹಿಳೆ, ಗುಬ್ಬಿ ತಾಲ್ಲೂಕು ವಡ್ಡರಹಳ್ಳಿಯ 70 ವರ್ಷದ ಪುರುಷ ಮೃತಪಟ್ಟಿದ್ದಾರೆ.

ADVERTISEMENT

ಭಾನುವಾರ ತುಮಕೂರು ತಾಲ್ಲೂಕಿನಲ್ಲಿಯೇ 170 ಮಂದಿಗೆ ಸೋಂಕು ದೃಢವಾಗಿದೆ.

176 ಮಂದಿ ಗುಣಮುಖ: ಭಾನುವಾರ 236 ಮಂದಿ ಗುಣಮುಖರಾಗಿ ಮನೆಗೆ ಮರಳಿದರು. ಈವರೆಗೆ 9,212 ಮಂದಿಗೆ ಸೋಂಕು ದೃಢ ಪಟ್ಟಿದ್ದು, ಈಗಾಗಲೇ 6,877 ಗುಣಮುಖ ರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2,117 ಸಕ್ರಿಯ ಪ್ರಕರಣಗಳಿವೆ.

ತಹಶೀಲ್ದಾರ್‌ಗೆ ಸೋಂಕು: ಪಾವಗಡ: ತಹಶೀಲ್ದಾರ್ ಹಾಗೂ ಮೂವರು ಸಿಬ್ಬಂದಿಗೆ ಕೋವಿಡ್– 19 ದೃಢಪಟ್ಟ ಕಾರಣ ತಹಶೀಲ್ದಾರ್ ಕಚೇರಿಯನ್ನು ಕಂಟೈಂನ್‌ಮೆಂಟ್ ಜೋನ್ ಆಗಿ ಮಾಡಲಾಗಿದೆ.

ಈಚೆಗೆ ತಾಲ್ಲೂಕಿಗೆ ವರ್ಗಾವಣೆಯಾಗಿ ಬಂದ ತಹಶೀಲ್ದಾರ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರೊಟ್ಟಿಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ಪ್ರಯಾಣಿಸಿದ್ದ ಕಂದಾಯ ನಿರೀಕ್ಷಕ, ಇಬ್ಬರು ಗ್ರಾಮ ಲೆಕ್ಕಿಗರಿಗೆ ಸೋಂಕು ದೃಢಪಟ್ಟಿದೆ.

ಕೋವಿಡ್ ದೃಢಪಟ್ಟ ದಿನವೂ ತಹಶೀಲ್ದಾರ್ ಅವರು ಕಚೇರಿಯಲ್ಲಿ ಕೆಲ ಕಡತಗಳ ವಿಲೇವಾರಿ ಮಾಡಿದ್ದರಿಂದ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.