ADVERTISEMENT

ಸಂವಿಧಾನ ಅರಿತು ಬಹುಮಾನ ಗೆದ್ದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:10 IST
Last Updated 27 ನವೆಂಬರ್ 2025, 5:10 IST
ತುಮಕೂರಿನಲ್ಲಿ ಬುಧವಾರ ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಬುಧವಾರ ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು   

ತುಮಕೂರು: ಜಿಲ್ಲಾ ಆಡಳಿತದಿಂದ ನಗರದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಕುರಿತು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

ಸಂವಿಧಾನದ ವಿವಿಧ ಅನುಚ್ಛೇದ, ತಿದ್ದುಪಡಿ, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಕುರಿತು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಕ್ಕಳನ್ನು ಪ್ರಶ್ನಿಸಿದರು. ಸರಿಯಾದ ಉತ್ತರ ನೀಡಿದವರಿಗೆ ಬಹುಮಾನವಾಗಿ ‘ಭಾರತ ಸಂವಿಧಾನ’ ಪುಸ್ತಕ, ಸಿಹಿಯನ್ನು ಜಿಲ್ಲಾಧಿಕಾರಿ ವಿತರಿಸಿದರು. ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ನಗರದ ಗುಂಚಿಚೌಕದ ಮೌಲಾನಾ ಆಜಾದ್ ಶಾಲೆ ವಿದ್ಯಾರ್ಥಿಗಳಾದ ಮೊಹಮ್ಮದ್ ಖಾಸಿಂ ಸಾಬ್, ಜೋಯನಾಜ್, ಬಿಕ್ಕೆಗುಡ್ಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಂಚನ, ಮಂಜು, ಕೋರಾ ಗ್ರಾಮದ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಚೇತನ್, ನಗರದ ಎಂಪ್ರೆಸ್ ಶಾಲೆ ವಿದ್ಯಾರ್ಥಿ ಭಾರ್ಗವಿ ಸೇರಿದಂತೆ 5 ವಿದ್ಯಾರ್ಥಿಗಳು ಬಹುಮಾನಕ್ಕೆ ಪಾತ್ರರಾದರು.

ADVERTISEMENT

ಶುಭ ಕಲ್ಯಾಣ್ ಮಾತನಾಡಿ, ‘ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಶೋಷಣೆ ವಿರುದ್ಧ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳು ದೊರೆತಿವೆ. ಇದರಿಂದಾಗಿ ನೆಮ್ಮದಿಯಾಗಿ ಸಮಾಜದಲ್ಲಿ ಬದುಕುತ್ತಿದ್ದೇವೆ. ಭಾರತದಲ್ಲಿ 1901ರಲ್ಲಿ ಶೇ 1ರಷ್ಟಿದ್ದ ಮಹಿಳೆಯರ ಸಾಕ್ಷರತಾ ಪ್ರಮಾಣ ಸಂವಿಧಾನದ ಹಕ್ಕುಗಳಿಂದಾಗಿ ಈಗ ಶೇ 80ಕ್ಕೆ ತಲುಪಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ‘ಆಧುನಿಕ ಇತಿಹಾಸದಲ್ಲಿ ನಮ್ಮ ಸಂವಿಧಾನವು ವಿಶ್ವದ ಶ್ರೇಷ್ಠ ಗ್ರಂಥವೆನಿಸಿಕೊಂಡಿದೆ. ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂವಿಧಾನ ರಚಿಸಲಾಗಿದೆ. ಸಾಮಾನ್ಯ ವ್ಯಕ್ತಿಯೂ ಅನ್ಯಾಯಕ್ಕೆ ಒಳಗಾದಾಗ ನ್ಯಾಯಕ್ಕಾಗಿ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಹಕ್ಕನ್ನು ಸಂವಿಧಾನ ನೀಡಿದೆ’ ಎಂದು ನೆನಪಿಸಿಕೊಂಡರು.

ಪ್ರತಿಯೊಬ್ಬರೂ ಸಂವಿಧಾನ ಪುಸ್ತಕ ಓದಿ ತಿಳಿಯಬೇಕು. ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ವಿ.ಎಲ್.ನರಸಿಂಹಮೂರ್ತಿ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿ.ಪಂ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಡಿಎಲ್‍ಬಿಸಿ ಸದಸ್ಯ ಶ್ರೀಧರ್, ಡಿಡಿಪಿಐ ರಘುಚಂದ್ರ, ಡಿಡಿಪಿಯು ಬಾಲಗುರುಮೂರ್ತಿ, ಬಿಇಒ ಹನುಮಂತಪ್ಪ, ಮುಖಂಡರಾದ ರಂಜನ್‌, ಕುಪ್ಪೂರು ಶ್ರೀಧರ್‌, ನಾರಾಯಣ್‌, ನಾಗರಾಜು, ಕೃಷ್ಣಪ್ಪ, ವೆಂಕಟೇಶ್‌, ರಘು, ಪ್ರದೀಪ್‌ಕುಮಾರ್‌, ನರಸಿಂಹಮೂರ್ತಿ, ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಂವಿಧಾನ ಜಾಗೃತಿ ಜಾಥಾ ನಡೆಯಿತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.