ADVERTISEMENT

ಇಂದಿರಾ ಕ್ಯಾಂಟೀನ್: ಉಚಿತ ಊಟ

​ಪ್ರಜಾವಾಣಿ ವಾರ್ತೆ
Published 13 ಮೇ 2021, 8:41 IST
Last Updated 13 ಮೇ 2021, 8:41 IST
ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಜನರು ಊಟ ಮಾಡಿದರು
ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಜನರು ಊಟ ಮಾಡಿದರು   

ತುಮಕೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ತಿಂಡಿ, ಊಟ ನೀಡುವ ವ್ಯವಸ್ಥೆ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಕ್‌ಡೌನ್ ಸಮಯದಲ್ಲೂ ಜನರು ಕ್ಯಾಂಟೀನ್‌ಗೆ ಬಂದು ಆಹಾರ ಸೇವಿಸುತ್ತಿದ್ದಾರೆ.

ಆಹಾರ ಸಿಗದೆ ಅಸಿವಿನಿಂದ ಜನರು ಸಾವನ್ನಪ್ಪುವುದು ಹೆಚ್ಚುತ್ತಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬಡವರಿಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದೆ. ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಈಚೆಗೆ ವ್ಯಕ್ತಿಯೊಬ್ಬರು ಅಸಿವಿನಿಂದ ಮೃತಪಟ್ಟಿದ್ದು, ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿ, ಉಚಿತವಾಗಿ ಆಹಾರ ನೀಡುತ್ತಿದೆ.

ಲಾಕ್‌ಡೌನ್‌ನಿಂದಾಗಿ ಬಹುತೇಕ ಹೋಟೆಲ್‌ಗಳು ಮುಚ್ಚಿವೆ. ಸಣ್ಣಪುಟ್ಟ ಹೋಟೆಲ್‌ಗಳು ಮುಚ್ಚಿದ್ದು, ದೊಡ್ಡಮಟ್ಟದ ಹೋಟೆಲ್‌ಗಳು ಮಾತ್ರ ತೆರೆದಿವೆ.ತೆರೆದಿರುವ ಕಡೆಗಳಲ್ಲಿ ಮಾರ್ಸೆಲ್‌ಗೆ ಮಾತ್ರ ಅವಕಾಶವಿದೆ. ನಿರ್ಗತಿಕರು, ಕಾರ್ಮಿಕರು, ಬಡ ವರ್ಗದವರು, ಅಸಹಾಯಕರು ದೊಡ್ಡ ಹೋಟೆಲ್‌ಗಳಿಗೆ ಹೋಗಿ ದುಬಾರಿ ಹಣ ಕೊಟ್ಟು ಊಟ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಇಂತಹವರಿಗೆ ನೆರವಾಗುವ ದೃಷ್ಟಿಯಿಂದ ಉಚಿತವಾಗಿ ಆಹಾರ ನೀಡಲಾಗುತ್ತಿದೆ.

ADVERTISEMENT

ನಗರದಲ್ಲಿ 4 ಇಂದಿರಾ ಕ್ಯಾಂಟಿನ್‌ಗಳಿದ್ದು, ಪ್ರತಿಯೊಂದರಲ್ಲೂ 500 ಜನರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಮಂಗಳವಾರದಿಂದ ಆರಂಭವಾಗಿದ್ದು ಪ್ರತಿ ನಿತ್ಯ ಒಂದು ಸಮಯಕ್ಕೆ 4 ಕ್ಯಾಂಟೀನ್‌ಗಳಿಂದ ಸುಮಾರು 1,500 ಮಂದಿ ಊಟ, ಉಪಹಾರ ಸೇವಿಸುತ್ತಿದ್ದಾರೆ. ದಿನಗಳು ಕಳೆದಂತೆ ಈ ಪ್ರಮಾಣ ಹೆಚ್ಚಾಗಬಹುದು.

ಈಗ 1,500 ಜನ ಊಟ, ತಿಂಡಿ ಮಾಡುತ್ತಿದ್ದು, ಸರ್ಕಾರ ಒಬ್ಬರಿಗೆ ಒಂದು ದಿನಕ್ಕೆ ₹57 ವೆಚ್ಚ ಮಾಡುತ್ತಿದೆ. ಅಂದರೆ ದಿನಕ್ಕೆ ₹85,500 ಭರಿಸುತ್ತಿದೆ. 2 ಸಾವಿರ ಜನರು ಊಟ ಮಾಡಿದರೆ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ.

‘ಸರ್ಕಾರದ ಆದೇಶದಂತೆ ಮಂಗಳವಾರ ದಿಂದಲೇ ಕ್ಯಾಂಟೀನ್‌ಗಳಲ್ಲಿ ಆಹಾರ ನೀಡಲಾಗುತ್ತಿದೆ. ಸದ್ಯಕ್ಕೆ ಪ್ರತಿ ಕ್ಯಾಂಟೀನ್‌ಗೆ 500 ಜನರ ಮಿತಿಯನ್ನು ನಿಗದಿಪಡಿಸಿದೆ. ಬೇಡಿಕೆ ಹೆಚ್ಚಾದರೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.