ADVERTISEMENT

ಚಿಕ್ಕನಾಯಕನಹಳ್ಳಿ | ತೆಂಗು: ಹೆಚ್ಚಿದ ಬಿಳಿನೋಣ ಬಾಧೆ

ಆರ್.ಸಿ.ಮಹೇಶ್
Published 12 ಮೇ 2025, 7:54 IST
Last Updated 12 ಮೇ 2025, 7:54 IST
   

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ತೆಂಗು ಬೆಳೆಗಾರರಿಗೆ ಸಂಕಷ್ಟ ಎದುರಾಗಿದ್ದು, ಪ್ರತಿ ವರ್ಷವೂ ಒಂದೊಂದು ರಾಗಬಾಧೆ ಕಾಡುತ್ತಿದೆ. ಈ ಬಾರಿ ಬಿಳಿ ನೋಣಗಳ ಕಾಟಕ್ಕೆ ರೈತರು ಹೈರಾಣಾಗಿದ್ದು, ಫಸಲು ಒತ್ತಟ್ಟಿ ಗಿರಲಿ ಮರಗಳು ಉಳಿದರೆ ಸಾಕು ಎನ್ನುತ್ತಿದ್ದಾರೆ.

ಈ ಹಿಂದೆ ನುಸಿಪೀಡೆ, ನೀರಿನ ಕೊರತೆ ಸೇರಿದಂತೆ ವಿವಿಧ ರೋಗಗಳಿಗೆ ಮರಗಳು ನಿತ್ರಾಣಗೊಂಡಿದ್ದವು. ಪ್ರಸಕ್ತ ವರ್ಷದಲ್ಲಿ ಬಿಳಿನೊಣಗಳ ಕಾಟ ರೈತರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ತೆಂಗು ಅಲ್ಪಸ್ವಲ್ಪ ತೇವಾಂಶ ಕೂಡಿಟ್ಟುಕೊಂಡು ತಿಂಗಳುಗಟ್ಟಲೇ ಜೀವ ಹಿಡಿದಿಟ್ಟುಕೊಳ್ಳುವುದರಿಂದ ನೀರಿನ ಕೊರತೆಯಿಂದ ಅಷ್ಟೊಂದು ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ರೋಗ ಬಾಧೆಗೆ ತೆಂಗು ತತ್ತರಿಸಿ ಹೋಗಿದೆ.

10 ವರ್ಷಗಳಿಂದ ಅಡಿಕೆ ಬೆಳೆಯುವ ಧಾವಂತದಲ್ಲಿ ತೆಂಗಿನ ಮೇಲಿನ ವ್ಯಾಮೋಹ ಕಡಿಮೆಯಾಗಿತ್ತು. ಎರಡು ವರ್ಷಗಳಿಂದ ಅಡಿಕೆ ಬೆಳೆಯವ ಪ್ರದೇಶ ಹೆಚ್ಚಾಗಿ ತೆಂಗಿಗೆ ನೀರು ಹರಿಸಲು ಕಷ್ಟವಾಗಿ ತೆಂಗು ನೇಪತ್ಯಕ್ಕೆ ಸರಿಯುವ ಅತಂಕ ಎದುರಾಗಿದೆ.

ADVERTISEMENT

ರೋಗ ಬಾಧೆ: ತೆಂಗು ಅಳಿವಿನ ಅತಂತಕದ ನಡುವೆ ತೆಂಗಿಗೆ ಸಾಲು ಸಾಲು ರೋಗಗಳು ತಗಲುತ್ತಿವೆ. ಕಾಂಡಸೋರುವ, ಕಪ್ಪುತಲೆ ಹುಳು, ಮೂತಿ ಹುಳು ಸೇರಿದಂತೆ ಇತರ ಬಾಧೆಯಿಂದ ಸಾವಿರಾರು ಮರಗಳನ್ನು ಕಳೆದುಕೊಂಡಿರುವ ರೈತರಿಗೆ ಬಿಳಿನೊಣಗಳ ಕಾಟವೂ ಮರಗಳ ಜೀವ ಹಿಂಡುತ್ತಿದೆ. ಬಿಳಿನೊಣ ಬೀಳುವುದರಿಂದ ಗರಿಗಳಲ್ಲಿನ ಪತ್ರಹರಿತ್ತು (ಹಸಿರು) ಹೀರಿ ಗರಿಗಳು ಒಣಗುವಂತೆ ಮಾಡುತ್ತಿವೆ. ಆರೋಗ್ಯವಂತ ಮರಗಳು ಕೂಡ ನೋಡನೋಡುತ್ತಲೇ ಗರಿಗಳು ಉದುರಿ ಹೋಗುತ್ತಿವೆ. ಒಂದೊಂದು ತೋಟದಲ್ಲೂ ಐದಾರು ಮರಗಳು ಬಿಳಿನೊಣಗಳ ಕಾಟಕ್ಕೆ ಬಲಿಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.