ADVERTISEMENT

ಛಲ ಬಿಡದೆ ಸಾಧಿಸಿ ತೋರಿಸಿ: ನಾರಾಯಣಮೂರ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 15:25 IST
Last Updated 25 ಜನವರಿ 2025, 15:25 IST
ತುಮಕೂರು ವಿ.ವಿಯಲ್ಲಿ ಶನಿವಾರ ಪ್ರೇರಣಾ ಉಪನ್ಯಾಸಕ ಕಾರ್ಯಕ್ರಮದಲ್ಲಿ ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮಾತನಾಡಿದರು. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸ್ವಾಮಿ ಜಪಾನಂದ,  ಕುಲಸಚಿವರಾದ ನಾಹಿದಾ ಜಮ್‌ ಜಮ್ ಉಪಸ್ಥಿತರಿದ್ದರು
ತುಮಕೂರು ವಿ.ವಿಯಲ್ಲಿ ಶನಿವಾರ ಪ್ರೇರಣಾ ಉಪನ್ಯಾಸಕ ಕಾರ್ಯಕ್ರಮದಲ್ಲಿ ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮಾತನಾಡಿದರು. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸ್ವಾಮಿ ಜಪಾನಂದ,  ಕುಲಸಚಿವರಾದ ನಾಹಿದಾ ಜಮ್‌ ಜಮ್ ಉಪಸ್ಥಿತರಿದ್ದರು   

ತುಮಕೂರು: ‘ಜೀವನದಲ್ಲಿ ಛಲ ಬಿಡದೆ ಏನನ್ನಾದರೂ ಸಾಧಿಸಿ ತೋರಿಸಬೇಕು. ಇಲ್ಲವಾದರೆ ನಿಮಗೂ, ಪ್ರಾಣಿಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಯುವ ಸಮೂಹಕ್ಕೆ ಸಲಹೆ ನೀಡಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪ್ರೇರಣಾ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ರೀತಿಯ ಅವಕಾಶಗಳು ಸಿಗುತ್ತಿವೆ. ಶಿಕ್ಷಣ ಸೇರಿದಂತೆ ಸಾಧನೆಗೆ ಅಗತ್ಯ ಮಾರ್ಗಗಳು ತೆರೆದುಕೊಂಡಿವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ದೇಶವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು. ಆದರೆ ಸಾಕಷ್ಟು ಮಂದಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳದಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ADVERTISEMENT

ಸ್ವಾತಂತ್ರ್ಯ ಬಂದ ಏಳು ದಶಕಗಳಲ್ಲಿ ಭಾರತ ಸಾಕಷ್ಟು ಸಾಧನೆ ಮಾಡಿದೆ ಎಂಬ ಹಮ್ಮೆ ಇದೆ. ಹಲವು ಸಮಸ್ಯೆಗಳನ್ನು ಎದುರಿಸಿ ದೇಶ ಮುನ್ನಡೆದಿದೆ. ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಹಲವು ಸೌಲಭ್ಯಗಳು ಸಿಕ್ಕಿವೆ. ಜೀವನ ಮಟ್ಟ ಸುಧಾರಿಸಿದೆ. ಆದರೆ ಇನ್ನೂ ದೇಶದಲ್ಲಿ ಶೇ 60ರಷ್ಟು ಜನರಿಗೆ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ಉಚಿತವಾಗಿ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತವಾಗಿ ಸೌಲಭ್ಯ ಕೊಡುವುದನ್ನು ಟೀಕಿಸುತ್ತಿಲ್ಲ. ಇಷ್ಟು ವರ್ಷಗಳ ಸುಧೀರ್ಘ ಅವಧಿಯಲ್ಲಿ ಏನು ಸಾಧನೆ ಮಾಡಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಸಮಸ್ಯೆಗಳನ್ನು ಮೆಟ್ಟಿನಿಂತು, ಎದುರುಗೊಳ್ಳುವ ಸವಾಲು ಯುವ ಸಮುದಾಯದ ಮೇಲಿದೆ. ಕಠಿಣ ಪರಿಶ್ರಮ, ಉನ್ನತ ಧ್ಯೇಯೋದ್ದೇಶ, ಶಿಸ್ತು, ಬದ್ಧತೆಯಿಂದ ಕೆಲಸ ಮಾಡಿದರೆ ಸಾಧನೆ ಸಾಧ್ಯವಾಗಿಸಿಕೊಳ್ಳಬಹುದು. ಎರಡನೇ ಮಹಾಯುದ್ಧದಲ್ಲಿ ಸೋತರೂ ಜಪಾನಿಯರು ಧೃತಿಗೆಡದೆ ಕಠಿಣ ಪರಿಶ್ರಮದಿಂದ ದೇಶವನ್ನು ಮರು ನಿರ್ಮಾಣ ಮಾಡಿದರು. ಅಂತಹ ಛಲ ನಿಮ್ಮಲ್ಲೂ ಒಡಮೂಡಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಮೊದಲ ‍‍ರ‍್ಯಾಂಕ್ ಬರಬೇಕಾದರೆ ಏನನ್ನು ಮಾಡಬೇಕು ಎಂಬ ಯೋಚನೆ ನಿಮ್ಮ ಮನಸ್ಸಿನಲ್ಲಿ ಮೂಡಬೇಕು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಪ್ರಯತ್ನಿಸಿದರೆ ಸಾಧನೆ ಸಾಧ್ಯವಾಗಲಿದೆ. ಅದೇ ರೀತಿ ಉದ್ಯೋಗ ಕ್ಷೇತ್ರ ಹಾಗೂ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಸಮಯದಲ್ಲೂ ಸಿದ್ಧತೆಗಳನ್ನು ಮಾಡಿಕೊಂಡು, ಬದ್ಧತೆಯಿಂದ ಮುನ್ನಡೆದರೆ ಸಾಧನೆ ಸುಲಭವಾಗುತ್ತದೆ ಎಂದರು. ಫ್ಯಾರೀಸ್‌ನಿಂದ ವಾಪಸ್ ಬಂದು ಇನ್ಫೊಸಿಸ್ ಸಂಸ್ಥೆ ಕಟ್ಟಿ ಬೆಳೆಸಿದ ಪರಿಯನ್ನು ಉದಾಹರಣೆಯಾಗಿ ನೀಡಿದರು.

ಮುಂದುವರಿದ ರಾಷ್ಟ್ರಗಳ ಸ್ಥಿತಿಗತಿ, ಅಲ್ಲಿನ ಅಭಿವೃದ್ಧಿ ವಿಚಾರಗಳನ್ನು ಮುಂದಿಡುತ್ತಲೇ ನಮ್ಮಲ್ಲಿನ ರಾಜಕೀಯ ವ್ಯವಸ್ಥೆ, ಕಾರ್ಯಾಂಗದ ಕಾರ್ಯವೈಖರಿ ಬಗ್ಗೆ ಪರೋಕ್ಷವಾಗಿ ಅತೃಪ್ತಿ ವ್ಯಕ್ತಪಡಿಸಿದರು.

ಸ್ವಾಮಿ ಜಪಾನಂದ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್‌ ಜಮ್, ಪ್ರೊ.ಕೆ.ಪ್ರಸನ್ನಕುಮಾರ್, ಪ್ರೊ.ಕೆ.ಜಿ.ಪರಶುರಾಮ್, ಪ್ರೊ.ಬಿ.ರವೀಂದ್ರ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.