ADVERTISEMENT

ತಳಸಮುದಾಯಗಳಿಗೆ ಅನ್ಯಾಯ: ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 3:52 IST
Last Updated 15 ಮಾರ್ಚ್ 2021, 3:52 IST
ಸಮಾರಂಭದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜೀಮಾಭಿ ಇದ್ದರು
ಸಮಾರಂಭದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜೀಮಾಭಿ ಇದ್ದರು   

ತುಮಕೂರು: ಒಕ್ಕಲಿಗ ಹಾಗೂ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ತಲಾ ₹ 500 ಕೋಟಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಶೇ 65ರಷ್ಟಿರುವ ಹಿಂದುಳಿದ ಎಲ್ಲ ತಳ ಸಮುದಾಯಗಳಿಗೆ ₹ 500 ಕೋಟಿ ಅನುದಾನ ಬಿಡಗಡೆ ಮಾಡುವ ಮೂಲಕ ತಾರತಮ್ಯ ಎಸಗಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದರು.

ನಗರದ ಕೆಎನ್ಆರ್ ಅಭಿಮಾನಿ ಬಳಗ ಮತ್ತು 28ನೇ ವಾರ್ಡ್ ನಾಗರಿಕರ ವೇದಿಕೆ ಆಯೋಜಿಸಿದ್ದ ಮೇಯರ್ ಬಿ.ಜಿ.ಕೃಷ್ಣಪ್ಪ ಹಾಗೂ ಉಪಮೇಯರ್ ನಾಜೀಮಾಭಿ ಇಸ್ಮಾಯಿಲ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರ ಕೆಳ ಸಮುದಾಯಗಳಿಗೆ ಮಾಡಿರುವ ತಾರತಮ್ಯದ ಬಗ್ಗೆ ಶಾಸಕರು ಧ್ವನಿ ಎತ್ತಬೇಕಿದೆ. ಅಧಿಕಾರಕ್ಕೆ ಬಂದಾಗ ಜನರಿಗಾಗಿ ಕೆಲಸ ಮಾಡಬೇಕು. ಆಗಷ್ಟೇ ಸಾರ್ವಜನಿಕರ ಮನಸ್ಸಿನಲ್ಲಿ ಉಳಿಯಲು ಸಾಧ್ಯ ಎಂದರು.

ADVERTISEMENT

ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಮಾತನಾಡಿ, ಮರಳೂರು ಕೆರೆಗೆ 6 ತಿಂಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನೀರು ಹರಿಸಲು ಎಲ್ಲ ಸಿದ್ಧತೆ ನಡೆದಿವೆ. ಆ ಮೂಲಕ ಈ ಭಾಗದ ಬಹುದಿನ ಬೇಡಿಕೆ ಈಡೇರಿಸಲಾಗುತ್ತದೆ.

ಗಂಗಸಂದ್ರ ಮತ್ತು ಮರಳೂರು ಕೆರೆಗೂ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಶೀಘ್ರ ನೀರು ಹರಿಯಲಿದೆ. ಗಂಗಸಂದ್ರ ಕೆರೆಗೆ ಗ್ರಾವಿಟಿ ಮೂಲಕ ನೀರು ಹರಿಸಲು ಸಿದ್ಧತೆ ನಡೆದಿದ್ದು, ಟೆಂಡರ್ ಕೂಡ ಆಗಿದೆ. 7 ತಿಂಗಳೊಳಗೆ ಈ ಎರಡೂ ಕೆರೆಗಳಿಗೆ ನೀರು ಹರಿಯಲಿದ್ದು, ಎರಡೂ ಕೆರೆಗಳು ತುಂಬಿದರೆ ತುಮಕೂರು ನಗರದ ಜನರ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದರು.

ತುಮಕೂರು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ತುಮಕೂರು ಮಹಾನಗರಪಾಲಿಕೆ ಆಡಳಿತವನ್ನು ಸರಳೀಕರಣಗೊಳಿಸಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಲು ಮತ್ತು ಸಾರ್ವಜನಿಕರ ಯಾವುದೇ ಅರ್ಜಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿದರು. ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜಿಮಾಭಿ ಇಸ್ಮಾಯಿಲ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಕೆ.ಎನ್.ರಾಜಣ್ಣ ಅವರನ್ನು ಗೌರವಿಸಲಾಯಿತು. ಸದಸ್ಯರಾದ ಮಂಜುನಾಥ್, ಮರಳೂರು ಮಾಜಿ ಅಧ್ಯಕ್ಷ ಭೀಮಯ್ಯ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಗಳಿಗೇನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಧನಲಕ್ಷ್ಮಿ ರವಿ, ಪ್ರತಾಪ್ ಮದಕರಿ, ರಾಮಾಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.