ADVERTISEMENT

ಶ್ರೀಗಂಧ, ಬಿದಿರಿಗೆ ವಿಮೆ ಕಲ್ಪಿಸಿ: ಬಿ.ಆರ್.ರಘುರಾಮ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 3:07 IST
Last Updated 7 ಅಕ್ಟೋಬರ್ 2020, 3:07 IST
ಬಿ.ಆರ್.ರಘುರಾಮ್
ಬಿ.ಆರ್.ರಘುರಾಮ್   

ತುಮಕೂರು: ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿರುವ ಶ್ರೀಗಂಧ, ಬಿದಿರು ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಸಾಲ ಸೌಲಭ್ಯ, ವಿಮೆ ಕಲ್ಪಿಸಬೇಕು ಎಂದು ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಆರ್.ರಘುರಾಮ್ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀಗಂಧ, ಬಿದಿರು ಬೆಳೆಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಕೇಂದ್ರ, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ತುಮಕೂರು– ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ಅನ್ನು ಚತುಷ್ಪಥವನ್ನಾಗಿ ಪರಿವರ್ತಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಭಾಗದಲ್ಲಿ 27 ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಜಮೀನುಗಳಲ್ಲಿದ್ದ ಶ್ರೀಗಂಧದ ಮರಗಳಿಗೆ ಒಟ್ಟು ₹ 62 ಕೋಟಿ ನಿಗದಿಗೊಳಿಸಲಾಗಿದೆ. ಅರಣ್ಯ ಇಲಾಖೆಯು ಒಂದು ಮರಕ್ಕೆ ₹ 2,44,620 ಪರಿಹಾರ ನಿಗದಿಪಡಿಸಿದೆ ಎಂದರು.

ADVERTISEMENT

ಆದರೆ ಒಂದು ಶ್ರೀಗಂಧದ ಗಿಡಕ್ಕೆ ₹ 283 ನಿಗದಿಪಡಿಸಲಾಗಿದೆ. ಈ ಆದೇಶವನ್ನು ಅರಣ್ಯ ಇಲಾಖೆಯವರು ಖಾತೆದಾರರಿಗೆ ತಲುಪಿಸಿರುತ್ತಾರೆ ಎಂದು ಹೇಳಿದರು.

ಈ ವಿಚಾರ ನಮ್ಮ ಸಂಘದ ಗಮನಕ್ಕೆ ಬಂತು. ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದೆವು. ಈ ವಿಚಾರವಾಗಿ ಅ. 1ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ 20 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು ಎಂದರು.

ಕೊಟ್ಟ ಮಾತಿನಂತೆ ಪ್ರತಿ ಮರಕ್ಕೆ ₹ 2,44,620 ಪರಿಹಾರ ನೀಡಬೇಕು. ಕೇವಲ ₹ 283 ಕೊಡುವುದು ಸರಿಯಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಶ್ರೀಗಂಧಕ್ಕೆ ₹ 65 ಸಾವಿರದಿಂದ 1.50 ಲಕ್ಷ ಬೆಲೆ ಸಿಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಮುಖಂಡ ಹನುಮಂತರಾಯಪ್ಪ, ವಕೀಲ ಸದಾಶಿವಯ್ಯ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.