ADVERTISEMENT

ಎಲ್ಲರಿಗೂ ಘನತೆಯ ಬದುಕು ಸರ್ಕಾರದ ಹೊಣೆ: ಚಿಂತಕ ಪ್ರೊ.ಕೆ.ದೊರೈರಾಜ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:37 IST
Last Updated 25 ಡಿಸೆಂಬರ್ 2025, 7:37 IST
ತಿಪಟೂರಿನ ರೋಟರಿ ಭವನದಲ್ಲಿ ಅಲ್ಪಸಂಖ್ಯಾತರ ದಿನ ಆಚರಿಸಲಾಯಿತು
ತಿಪಟೂರಿನ ರೋಟರಿ ಭವನದಲ್ಲಿ ಅಲ್ಪಸಂಖ್ಯಾತರ ದಿನ ಆಚರಿಸಲಾಯಿತು   

ತಿಪಟೂರು: ಎಲ್ಲರಿಗೂ ಘನತೆಯ ಬದುಕು ನೀಡುವುದು ಸರ್ಕಾರಗಳ ಸಂವಿಧಾನಾತ್ಮಕ ಕರ್ತವ್ಯ ಎಂದು ಚಿಂತಕ ಪ್ರೊ.ಕೆ.ದೊರೈರಾಜ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಇನ್ಸಾಫ್ ಮತ್ತು ಸೌಹಾರ್ದ ತಿಪಟೂರು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕು ಮತ್ತು ವಾಸ್ತವ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸರ್ಕಾರಗಳು ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಭಾರತದ ಎಲ್ಲಾ ನಾಗರಿಕರಿಗೆ ಘನತೆಯ ಬದುಕು ನೀಡಬೇಕಾದ ಹೊಣೆಗಾರಿಕೆ ಹೊಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಕರ್ತವ್ಯಕ್ಕೆ ವಿರುದ್ಧವಾಗಿವೆ ಎಂದರು.

ADVERTISEMENT

ಧರ್ಮ–ಜಾತಿ ಆಧಾರಿತ ದ್ವೇಷ ರಾಜಕಾರಣ, ಮಾನವ ಸಮಾಜವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲಾರದು. ಜೀವ ವಿರೋಧಿ ಆಲೋಚನೆಗಳು ಸಮಾಜದ ಶಾಂತಿ ಹಾಳುಮಾಡುತ್ತವೆ ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್‌ಮುಜೀಬ್ ಮಾತನಾಡಿ, ಅಲ್ಪಸಂಖ್ಯಾತರ ಬಗ್ಗೆ ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಡಿ ದ್ವೇಷಭಾವನೆ ಮೂಡಿಸುವ ಕುತಂತ್ರಗಳನ್ನು ಸಮಾಜ ಗಂಭೀರವಾಗಿ ಗಮನಿಸಬೇಕು. ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕುಗಳನ್ನು ಗೌರವಿಸಿ ರಕ್ಷಿಸಬೇಕು. ದೇಶದ ಶೇಕಡ 20ರಷ್ಟು ಜನಸಂಖ್ಯೆಯಾದ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಸಾಧಿಸುವ ಅಭಿವೃದ್ಧಿ ಸಂಪೂರ್ಣವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.

ಜನಸ್ಪಂದನ ಟ್ರಸ್ಟ್ನ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ಭಾರತೀಯ ಸಮಾಜದಲ್ಲಿ ಸಹಬಾಳ್ವೆ ಹಾಸುಹೊಕ್ಕಾಗಿದೆ. ವಿಭಜನಾ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ಅಲ್ಪಸಂಖ್ಯಾತ ಸಮುದಾಯವು ವಿವೇಕದಿಂದ ನಡೆದುಕೊಳ್ಳುವುದು ಇಂದಿನ ಅಗತ್ಯ ಎಂದರು.

ಸೌಹಾರ್ದ ತಿಪಟೂರು ಕಾರ್ಯದರ್ಶಿ ಅಲ್ಲಾಬಕಾಶ ಎ. ಮಾತನಾಡಿ, ವಿಶ್ವ ಸಂಸ್ಥೆಯು ಅಲ್ಪಸಂಖ್ಯಾತರ ಮೇಲಿನ ದಾಳಿ ಹಾಗೂ ದಬ್ಬಾಳಿಕೆಗಳನ್ನು ಗಮನಿಸಿ ಡಿಸೆಂಬರ್ 18ರಂದು ಅಂತರರಾಷ್ಟ್ರೀಯ ಅಲ್ಪಸಂಖ್ಯಾತರ ದಿನವಾಗಿ ಆಚರಿಸಲು ಕರೆ ನೀಡಿರುವುದನ್ನು ಸ್ಮರಣೀಯ. ಸರ್ಕಾರಗಳು ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಸಂಬಂಧಿತ ಸ್ಥಿತಿಗತಿಗಳ ಸುಧಾರಣೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಪ್ರಾಂಶುಪಾಲ ಸೈಯದ್ ಅಯಜ್ ಪಾಷ, ಇನ್ಸಾಫ್ ತುಮಕೂರಿನ ರಫೀಕ್‌ಪಾಷ, ತನ್ವಿರ್, ಸಮೀಉಲ್ಲಾ, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ನವ್‌ಜವಾನ್ ಕಮಿಟಿಯ ನದಿಮ್, ಮುಜ್ಜು ತಾಸಿನ್ ಷರೀಫ್, ಸಿರಾಜ್, ಪ್ಯಾರೆಜಾನ್‌, ನಾಸಿರ್‌ಖಾನ್, ಬಾಬುದ, ಆರ್.ಎಸ್.ಚನ್ನಬಸವಣ್ಣ, ರಾಜಮ್ಮ, ನರಸಿಂಹಮೂರ್ತಿ, ಚಂದ್ರಣ್ಣ, ಮೋಹನ್‌ಕುಮಾರ್ ಸಿಂಗಿ ಹಾಜರಿದ್ದರು.

ನಗರದ ರೋಟರಿ ಭವನದಲ್ಲಿ ಇನ್ಸಾಫ್ ಮತ್ತು ಸೌಹಾರ್ದ ತಿಪಟೂರು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.