ADVERTISEMENT

ಕೃಷಿಭೂಮಿಯಲ್ಲಿ ಕಬ್ಬಿಣ ತ್ಯಾಜ್ಯ ಮರುಬಳಕೆ ಘಟಕ

ಪರಿಸರಕ್ಕೆ ಮಾರಕ; ಘಟಕ ತೆರವುಗೊಳಿಸಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 8:03 IST
Last Updated 23 ಜುಲೈ 2020, 8:03 IST
ಕುಣಿಗಲ್ ಪುರಸಭೆ ಗಡಿಭಾಗದ ಮಲ್ಲಾಘಟ್ಟದಲ್ಲಿ ಪ್ರಾರಂಭವಾಗಿರುವ ಅನಧಿಕೃತ ಕಬ್ಬಿಣ ತ್ಯಾಜ್ಯ ಮರುಬಳಕೆ ಘಟಕ
ಕುಣಿಗಲ್ ಪುರಸಭೆ ಗಡಿಭಾಗದ ಮಲ್ಲಾಘಟ್ಟದಲ್ಲಿ ಪ್ರಾರಂಭವಾಗಿರುವ ಅನಧಿಕೃತ ಕಬ್ಬಿಣ ತ್ಯಾಜ್ಯ ಮರುಬಳಕೆ ಘಟಕ   

ಕುಣಿಗಲ್: ಪುರಸಭೆ ಎರಡನೇ ವಾರ್ಡ್ ಮಲ್ಲಾಘಟ್ಟ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕೃಷಿಭೂಮಿ ಯಲ್ಲಿ ಕಬ್ಬಿಣ ಕಾರ್ಖಾನೆಯ ಅಪಾಯಕಾರಿ ತ್ಯಾಜ್ಯ ಮರುಬಳಕೆ ಘಟಕ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದ ಕಬ್ಬಿಣ ಕಾರ್ಖಾನೆಯ ತ್ಯಾಜ್ಯವನ್ನು ಪ್ರಭಾವಿಯೊಬ್ಬರು ಮಲ್ಲಾಘಟ್ಟ ಕೃಷಿ ಜಮೀನಿನಲ್ಲಿ ಸಂಗ್ರಹಿಸಿ ಯಂತ್ರಗಳ ಮೂಲಕ ಬೇರ್ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಘಟಕವನ್ನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಕಬ್ಬಿಣದ ತ್ಯಾಜ್ಯ ಸಂಗ್ರಹ ಮಾಡಿರುವ ಪ್ರದೇಶಕ್ಕೆ ಹೊಂದಿಕೊಂಡಂತೆ ತೊರೆ ಇದೆ. ಮಳೆ ಆಗುತ್ತಿರುವುದರಿಂದ ತೊರೆಯ ನೀರು ಹರಿದು ಬೇಗೂರು ಕೆರೆ ಸೇರುತ್ತದೆ. ಘಟಕದವರು ತ್ಯಾಜ್ಯ ಸಂಗ್ರಹಣೆಯ ನೆಪದಲ್ಲಿ ತೊರೆಯ ಹಳ್ಳವನ್ನು ಸಹ ಮುಚ್ಚಿದ್ದಾರೆ. ಪರಿಸರ ಕಾಯ್ದೆ ಪ್ರಕಾರ ಇಂತಹ ಘಟಕಗಳ ಸ್ಥಾಪನೆಗೆ ಅವಕಾಶವಿಲ್ಲ. ಭೂ ಕಂದಾಯ ನಿಯಮಾವಳಿಗಳಿಗೆ ವಿರುದ್ಧವಾಗಿ ಘಟಕ ಕಾರ್ಯ ನಿರ್ವಹಿಸುತ್ತಿದ್ದರೂ ಕಂದಾಯ ಇಲಾಖೆ ಜಾಣ ಕುರುಡು ನೀತಿ ಅನುಸರಿಸುತ್ತಿದೆ’ ಎಂದು ಬೇಗೂರು ಗ್ರಾಮಸ್ಥ ಆನಂದ್ ದೂರಿದರು.

ADVERTISEMENT

‘ತೊರೆಯ ಪ್ರದೇಶವನ್ನು ಮುಚ್ಚಿ, ಕುರುಹು ಸಹ ಇಲ್ಲದಂತೆ ಮಾಡಿ, ಕಬ್ಬಿಣದ ತ್ಯಾಜ್ಯ ಘಟಕ ನಿರ್ಮಿಸಲಾಗಿದೆ. ಕೆರೆ ಸೇರಿದಂತೆ ಕಟ್ಟೆಯ ನೀರನ್ನು ಕುಲುಷಿತಗೊಳಿಸುತ್ತಿರುವ ಘಟಕದ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಮುಚ್ಚಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.