ತುಮಕೂರು: ಪಕ್ಷಾಂತರಿಗಳಿಗೆ ಟಿಕೆಟ್ ಕೊಡುವುದು ಎಲ್ಲ ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಪಾದಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ 20ನೇ ಸಮ್ಮೇಳನದ ಎರಡನೇ ದಿನವಾದ ಮಂಗಳವಾರ ‘ಪ್ರಸ್ತುತ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಪೂರಕವಾಗಿದೆಯೇ’ ಎಂಬ ಗೋಷ್ಠಿಯಲ್ಲಿ ಪ್ರಾಧ್ಯಾಪಕರೊಬ್ಬರ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಇತ್ತೀಚಿನ ದಿನಗಳಲ್ಲಿ ಸೈದ್ಧಾಂತಿಕವಾಗಿ ಯಾವೊಂದು ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಂತಹ ಸನ್ನಿವೇಶದಲ್ಲಿ ಅನಿವಾರ್ಯವಾಗಿ ಗೆಲ್ಲುವ ಸಾಮರ್ಥ್ಯ ಇರುವ ವ್ಯಕ್ತಿಗೆ ಟಿಕೆಟ್ ಕೊಡಬೇಕಾಗುತ್ತದೆ. ಪಕ್ಷಕ್ಕೆ ಬೆನ್ನೆಲುಬಾಗಿರುವ ವ್ಯಕ್ತಿಯನ್ನು ಬಿಟ್ಟು ರಾಜಕಾರಣ ಮಾಡುವುದು ಕಷ್ಟಕರ. ಅಂತಹ ಪ್ರಯತ್ನ ನಡೆಸಿದರೆ ಫಸಲು ಕೊಡುವ ಅಡಿಕೆ ಮರ ಕಡಿದು, ಹುಣಸೆ ಗಿಡ ನೆಟ್ಟಂತಾಗುತ್ತದೆ ಎಂದು ಬಣ್ಣಿಸಿದರು.
ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತರುವುದು, ಚುನಾವಣೆ ನಿಲ್ಲಲು ಕನಿಷ್ಠ ಶಿಕ್ಷಣ ನಿಗದಿಪಡಿಸುವುದು, ಚುನಾವಣೆ ವೆಚ್ಚವನ್ನು ಸರ್ಕಾರವೇ ಭರಿಸುವಂತಹ ನಿಯಮ ರೂಪಿಸುವುದು ಕಷ್ಟಕರ. ಕಡ್ಡಾಯ ಮತದಾನಕ್ಕಿಂತ, ವಿವೇಚನೆಯ ಮತದಾನ ಬೆಂಬಲಿಸಬೇಕು. ನಗರ ಪ್ರದೇಶದವರು, ಶಿಕ್ಷಿತರು, ವ್ಯಾಪಾರಿ ವರ್ಗದವರೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಂತಹವರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಯಾರು ಎಷ್ಟು ಕೊಡುತ್ತಾರೆ ಎಂದು ಮತದಾರರು ಕಾಯುವ ವ್ಯವಸ್ಥೆ ಸೃಷ್ಟಿಸಿದ್ದೇವೆ. ಮತದಾರರನ್ನೇ ವಿಷ ಮಾಡಿದ್ದೇವೆ. ಸೇವಾ ಮನೋಭಾವದ ರಾಜಕಾರಣಿಯನ್ನು ಬಯಸುತ್ತಿಲ್ಲ. ಆಸೆಯ ಬೆನ್ನೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೆಟ್ಟ ಸ್ಥಿತಿಗೆ ತಂದಿದ್ದೇವೆ. ಇಷ್ಟೆಲ್ಲ ವೈರುಧ್ಯ, ಅವ್ಯವಸ್ಥೆಯ ನಡುವೆ ಜೀವಂತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶದಲ್ಲಿ ಕಾಣಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ‘ಲೋಕಸಭೆಗೆ ವರ್ಷದಿಂದ ವರ್ಷಕ್ಕೆ ಆಯ್ಕೆಯಾಗುವ ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜಕಾರಣದಲ್ಲಿ ಕ್ರಿಮಿನಲ್‌ಗಳು ಪ್ರವೇಶಿಸದಂತೆ ತಡೆಯಬೇಕಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕಿದೆ’ ಎಂದು ಹೇಳಿದರು.
ಕಾರ್ಯಾಂಗ ನಿಯಂತ್ರಿಸಬೇಕಾದ ಶಾಸಕಾಂಗವೇ ಈಗ ಅದಕ್ಕೆ ಶರಣಾಗಿದೆ. ಕಾರ್ಯಾಂಗವೇ ಶಾಸಕಾಂಗ ನಿಯಂತ್ರಿಸುವ ಮಟ್ಟಕ್ಕೆ ಬಂದಿದೆ. ನ್ಯಾಯಾಂಗ, ಪತ್ರಿಕಾ ರಂಗ ಪ್ರಾಮಾಣಿಕವಾಗಿ ಉಳಿದಿದೆ? ಹಣ, ಜಾತಿ, ತೋಳ್ ಬಲ ರಾಜಕೀಯದಲ್ಲಿ ಹೆಚ್ಚುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನಿರಾಶಾದಾಯಕವಾಗಿದೆ ಎಂದರು.
ಪ್ರೊ.ಮುಸಾಫರ್ ಅಸಾದಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭೂ ಸುಧಾರಣೆ, ಜಾತಿ ಗುರುತಿಸುವುದು, ಮೀಸಲಾತಿ ನೀಡುವುದು, ಎಲ್ಲ ಜನವರ್ಗ ಒಳಗೊಳ್ಳುವಂತೆ ಮಾಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ’ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಸಾಯುತ್ತಿಲ್ಲ, ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ. ಗಟ್ಟಿಗೊಳಿಸಲು ಇನ್ನೂ ಗುದ್ದಾಡುತ್ತಿದ್ದೇವೆ ಎಂದರು.
ಎಲ್ಲ ಚುನಾವಣೆಯಲ್ಲೂ ಭ್ರಷ್ಟಾಚಾರ
ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಎಲ್ಲ ಚುನಾವಣೆಗಳೂ ಭ್ರಷ್ಟಾಚಾರದಿಂದ ಕೂಡಿವೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವಿಷಾದಿಸಿದರು.
ವಿಧಾನಸಭೆ ಚುನಾವಣೆಗೆ ₹25 ಕೋಟಿಯಿಂದ ₹100 ಕೋಟಿ ಖರ್ಚು ಮಾಡುವ ಸ್ಥಿತಿ ಬಂದಿದೆ. ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ ನನ್ನ ಬಳಿಗೆ ಬಂದ ಪದವೀಧರ ಮತದಾರರು ‘ಪ್ಯಾಕೇಜ್ ಇದೆಯೆ’ ಎಂದು ಕೇಳಿದರು.
ಮತದಾನ ಮಾಡಲು ಉದ್ಯೋಗಸ್ಥರಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ಇಂತಹ ರಜೆ ಪಡೆದವರು ಮತದಾನ ಮಾಡಬೇಕು. ಇಲ್ಲವಾದರೆ ವೇತನ ಸಹಿತ ರಜೆ ತೆಗೆದುಕೊಳ್ಳಬಾರದು. ವಿದ್ಯಾವಂತ ಸಮೂಹ ಪ್ರಜಾಪ್ರಭುತ್ವ ಬಲಪಡಿಸುವುದು ಬಿಟ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಪೂರಕವಾಗಿಲ್ಲ. ಸುಧಾರಣೆ ಮೂಲಕ ಬಲಪಡಿಸುವ ಮೂಲಕ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.