ADVERTISEMENT

ತುಮಕೂರಿನಲ್ಲಿ ₹100 ಕೋಟಿಯಲ್ಲಿ ಐ.ಟಿ ಪಾರ್ಕ್: ಸಚಿವ ಜಿ.ಪರಮೇಶ್ವರ

ಹಾಕಿ ಕ್ರೀಡಾಂಗಣ, ಈಜುಕೊಳದ ನಂತರ ಶೂಟಿಂಗ್ ಅಕಾಡೆಮಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 8:06 IST
Last Updated 27 ಜನವರಿ 2026, 8:06 IST
ತುಮಕೂರಿನ ಕ್ರೀಡಾಂಗಣದಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಜಿ.ಪರಮೇಶ್ವರ ಗೌರವ ವಂದನೆ ಸ್ವೀಕರಿಸಿದರು
ತುಮಕೂರಿನ ಕ್ರೀಡಾಂಗಣದಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಜಿ.ಪರಮೇಶ್ವರ ಗೌರವ ವಂದನೆ ಸ್ವೀಕರಿಸಿದರು   

ತುಮಕೂರು: ಬೆಂಗಳೂರು ಮಹಾನಗರಕ್ಕೆ ಉಪನಗರದಂತೆ ಬೆಳೆಯುತ್ತಿರುವ ತುಮಕೂರಿನಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ (ಐ.ಟಿ ಪಾರ್ಕ್) ನಿರ್ಮಾಣ ಮಾಡುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪ್ರಕಟಿಸಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಗರದಲ್ಲಿ ಐ.ಟಿ ಪಾರ್ಕ್ ನಿರ್ಮಾಣ ಆಗಬೇಕೆಂಬುದು ಜನರ ಬಹುದಿನಗಳ ನಿರೀಕ್ಷೆಯಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕಾಗಿ ₹100 ಮೀಸಲಿಡುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಒಪ್ಪಿಗೆ ಸಿಕ್ಕ ನಂತರ ಯೋಜನೆ ಸಾಕಾರಗೊಳ್ಳಲಿದೆ. ಬಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಸಲುವಾಗಿ ₹80 ಕೋಟಿ ವೆಚ್ಚದಲ್ಲಿ ಒಂದು ಸಾವಿರ ಮಕ್ಕಳ ಸಾಮರ್ಥ್ಯದ ಹಾಸ್ಟೆಲ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ₹500 ಕೋಟಿ ಮೊತ್ತದ ಯೋಜನೆಗಳು ಘೋಷಣೆಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಶೂಟಿಂಗ್ ಅಕಾಡೆಮಿ: ನಗರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಹಾಕಿ ಕ್ರೀಡಾಂಗಣ, ಈಜುಕೊಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹6 ಕೋಟಿ ಅನುದಾನ ಘೋಷಿಸಿದ್ದಾರೆ. ಇದಲ್ಲದೆ ಶೂಟಿಂಗ್ ಅಕಾಡೆಮಿ ಸ್ಥಾಪನೆಗೂ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಯದೇವ ಹೃದಯ ಶಸ್ತ್ರ ಚಿಕಿತ್ಸಾ ಆಸ್ಪತ್ರೆ, ತಿಪಟೂರಿನಲ್ಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಮಾರ್ಚ್‌ನಲ್ಲಿ ಕಂದಾಯ ಇಲಾಖೆಯಿಂದ 30 ಸಾವಿರ ಹಕ್ಕು ಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಕಳೆದ ಸಾಲಿನಲ್ಲಿ 7,555 ಹಕ್ಕು ಪತ್ರ ಡಿಜಿಟಲೀಕರಣಗೊಳಿಸಿ, 5,753 ಹಕ್ಕು ಪತ್ರಗಳನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಈವರೆಗೆ 5,073 ಇ–ಸ್ವತ್ತು ಖಾತೆ ಸೃಜಿಸಲಾಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುಬ್ಬಿ, ಕುಣಿಗಲ್, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಪಂಪ್ ಮಾಡಿ ಗುರುತ್ವಾಕರ್ಷಣ ಕಾಲುವೆಗಳ ಮೂಲಕ ಹರಿಸಲು 436 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈಗಾಗಲೇ ಈಗಾಗಲೇ 177 ಎಕರೆ ಭೂಸ್ವಾಧೀನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್‌ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.