ADVERTISEMENT

ತುಮಕೂರು: ಕಾಲೇಜು ಕಟ್ಟಡ ಉದ್ಘಾಟನೆಗೆ ಕೂಡದ ಕಾಲ!

₹3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ; ಗ್ರಂಥಾಲಯ, ಶೌಚಾಲಯ ಅಗತ್ಯ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2025, 5:37 IST
Last Updated 6 ಮೇ 2025, 5:37 IST
ತುಮಕೂರಿನ ಪಾಲಿಟೆಕ್ನಿಕ್‌ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಕಟ್ಟಡ
ತುಮಕೂರಿನ ಪಾಲಿಟೆಕ್ನಿಕ್‌ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಕಟ್ಟಡ   

ತುಮಕೂರು: ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಮೈದಾನದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ನಿರ್ಮಿಸಿರುವ ಪಾಲಿಟೆಕ್ನಿಕ್‌ ಕಾಲೇಜಿನ ಕಟ್ಟಡಗಳ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ.

ನಿರ್ಮಾಣ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಕೊಠಡಿಗಳನ್ನು ಬಳಸಲು ಸಾಧ್ಯವಾಗಿಲ್ಲ. ₹3 ಕೋಟಿ ವೆಚ್ಚದಲ್ಲಿ ಎರಡು ಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದೆ. ಒಂದರಲ್ಲಿ 3 ಕೊಠಡಿ, ಗ್ರಂಥಾಲಯ, 2 ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ. ಮತ್ತೊಂದು ಕಟ್ಟಡದಲ್ಲಿ 3 ಕೊಠಡಿಗಳಿವೆ. ಹಲವು ದಿನಗಳಿಂದ ಸುಸಜ್ಜಿತ ಕಟ್ಟಡಗಳಿಗೆ ಬೀಗ ಜಡಿಯಲಾಗಿದೆ.

2022ರ ಮೇ 20ರಂದು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. 2020 ರಲ್ಲಿಯೇ ಶಂಕು ಸ್ಥಾಪನೆ ನೆರವೇರಿಸಬೇಕಿತ್ತು. ಕೋವಿಡ್‌ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ. ಎರಡು ವರ್ಷಗಳ ನಂತರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಪ್ರಾರಂಭದಲ್ಲಿ ಕೆಲಸಗಳು ನಿಧಾನಗತಿಯಲ್ಲಿ ಸಾಗಿದ್ದವು. ಇದೀಗ ಎಲ್ಲ ಕಾರ್ಯ ಪೂರ್ಣಗೊಂಡ ನಂತರವೂ ಕೊಠಡಿ, ಗ್ರಂಥಾಲಯದ ಬಾಗಿಲು ತೆಗೆದಿಲ್ಲ.

ADVERTISEMENT

1 ಸಾವಿರ ವಿದ್ಯಾರ್ಥಿಗಳು: 1958ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಆರಂಭವಾಗಿದ್ದು, ಪ್ರಸ್ತುತ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈಗ ಇರುವ ಸಂಖ್ಯೆಗೆ ಹಳೆಯ ಕಟ್ಟಡದಲ್ಲಿರುವ ಕೊಠಡಿಗಳು ಸಾಲುತ್ತಿಲ್ಲ. ಇದರ ಜತೆಗೆ ಮಳೆ ಬಂದರೆ ಕೆಲವು ಕೊಠಡಿಗಳು ತೊಟ್ಟಿಕ್ಕುತ್ತಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿತ್ತು. ಕಾಮಗಾರಿ ಮುಗಿದರೂ ಹೆಚ್ಚಿನ ಪ್ರಯೋಜನ ಇಲ್ಲದಂತಾಗಿದೆ.

ಸಿವಿಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಮೆಕಾನಿಕಲ್‌ ಎಂಜಿನಿಯರಿಂಗ್‌, ಆಟೊಮೊಬೈಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಒಳಗೊಂಡಂತೆ ಆರು ಕೋರ್ಸ್‌ಗಳಿವೆ. ಪ್ರಥಮ ವರ್ಷ ಪ್ರತಿ ವಿಭಾಗಕ್ಕೆ 60 ಜನರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

‘ಈಗಷ್ಟೇ ಪಿಯುಸಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜು ಪ್ರವೇಶಾತಿ ಪ್ರಾರಂಭವಾಗಲಿದೆ. ಹೊಸ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತುವ ಮುನ್ನ ಹೊಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಬೇಕು. ಇಲ್ಲದಿದ್ದರೆ ಅವರು ಕೂಡ ಪಾಠ, ಪ್ರಯೋಗಾಲಯಕ್ಕಾಗಿ ಅಲೆದಾಟ ನಡೆಸಬೇಕಾಗುತ್ತದೆ’ ಎಂದು ಕಾಲೇಜಿನ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.

ಕೊಠಡಿ ಮುಂದೆ ಮಳೆ ನೀರು ನಿಂತಿರುವುದು
ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡದ ಮುಂಭಾಗದಲ್ಲಿ ಮದ್ಯದ ಬಾಟಲಿ ಎಸೆದಿರುವುದು

ಅಕ್ರಮ ಚಟುವಟಿಕೆ ತಾಣ

ಪಾಲಿಟೆಕ್ನಿಕ್‌ ಕಾಲೇಜು ಮೈದಾನ ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಮೈದಾನಕ್ಕೆ ಹೋಗಲು ಯಾವುದೇ ಗೇಟ್‌ ಅಳವಡಿಸಿಲ್ಲ. ಹೀಗಾಗಿ ರಾತ್ರಿ ವೇಳೆಯಲ್ಲಿ ಕುಡುಕರ ಅಡ್ಡೆಯಾಗುತ್ತಿದೆ. ಹೊಸ ಕಟ್ಟಡದ ಮುಂಭಾಗದಲ್ಲಿ ಮದ್ಯದ ಬಾಟಲಿ ಪ್ಲಾಸ್ಟಿಕ್‌ ಎಸೆಯಲಾಗಿದೆ. ಬೀದಿ ನಾಯಿಗಳು ಕಟ್ಟಡದ ಬಳಿ ಆಶ್ರಯ ಪಡೆಯುತ್ತಿವೆ. ಮಳೆ ಬಂದರೆ ಕಟ್ಟಡದ ಮುಂಭಾಗದಲ್ಲಿಯೇ ನೀರು ನಿಲ್ಲುತ್ತಿದೆ. ಸ್ವಚ್ಛತೆ ಸಂಪೂರ್ಣವಾಗಿ ಮಾಯವಾಗಿದೆ. ಗಿಡಗಂಟಿಗಳು ಬೆಳೆದಿದ್ದು ತೆರವುಗೊಳಿಸಲು ಕಾಲೇಜು ಆಡಳಿತ ಮಂಡಳಿ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ.

ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಇದರ ಬಗ್ಗೆ ಮಾಹಿತಿ ನೀಡಲು ನನಗೆ ಯಾವುದೇ ಅಧಿಕಾರವಿಲ್ಲ
-ಚಂದ್ರಶೇಖರ್‌, ಪ್ರಭಾರ ಪ್ರಾಂಶುಪಾಲ ಪಾಲಿಟೆಕ್ನಿಕ್‌ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.