ADVERTISEMENT

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಯಮಂಗಲಿ ನದಿ: ಹಲವು ಗ್ರಾಮಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 7:27 IST
Last Updated 3 ಆಗಸ್ಟ್ 2022, 7:27 IST
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಯಮಂಗಲಿ ನದಿ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಯಮಂಗಲಿ ನದಿ   

ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ಜಯಮಂಗಲಿ ನದಿ ಮೈದುಂಬಿಕೊಂಡಿದೆ. ಸುಮಾರು 50 ವರ್ಷಗಳ ನಂತರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ದಡದ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ತುಮಕೂರು ಸಮೀಪದ ದೇವರಾಯನದುರ್ಗದಲ್ಲಿ ಹುಟ್ಟಿ ಕೊರಟಗೆರೆ, ಕೋಡಗದಾಲ, ಪುರವರ, ಕೊಡಿಗೇನಹಳ್ಳಿ, ಮುದ್ದೇನಹಳ್ಳಿ ಮಾರ್ಗವಾಗಿ ಆಂಧ್ರಪ್ರದೇಶದ ಕಡೆಗೆ ಹರಿಯುವ ಜಯಮಂಗಲಿ ನದಿ ಸುಮಾರು 25 ವರ್ಷಗಳ ನಂತರ ಕಳೆದ ವರ್ಷ ತುಂಬಿ ಹರಿದಿತ್ತು. ತುಮಕೂರು, ಕೊರಟಗೆರೆ, ಮಧುಗಿರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮಧುಗಿರಿ ತಾಲ್ಲೂಕು ಪುರವರ ಹೋಬಳಿಯ ಚನ್ನಸಾಗರ, ಹನುಮಂತಪುರ, ಹಂದ್ರಾಳು, ತಗ್ಗಿಹಳ್ಳಿ, ಗಿಡ್ಡಯ್ಯನಪಾಳ್ಯ, ಸಂಕಾಪುರ, ವೀರನಾಗೇನಹಳ್ಳಿ, ಕೊಡಿಗೇನಹಳ್ಳಿ ಹೋಬಳಿಯ ವೀರಾಪುರ, ಕಾಳೇನಹಳ್ಳಿ, ರೆಡ್ಡಿಹಳ್ಳಿ ರಸ್ತೆ ಬದಿಯಲ್ಲಿರುವ ಮತ್ತು ನದಿ ದಡದಲ್ಲಿರುವ ಜಮೀನು, ಮನೆಗಳು ನೀರಿನಿಂದ ಜಲಾವೃತವಾಗಿವೆ. ಮುಖ್ಯವಾಗಿ ಗೌರಿಬಿದನೂರು- ಮಧುಗಿರಿ ಮುಖ್ಯ ರಸ್ತೆ, ಕಾಳೇನಹಳ್ಳಿ- ವೀರಾಪುರ, ರೆಡ್ಡಿಹಳ್ಳಿ ಮಾರ್ಗದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಬಿಜವರ ಗ್ರಾಮದ ಕೆರೆ ಕೋಡಿ ನೀರು ಮತ್ತು ಜಯಮಂಗಲಿ ನದಿ ನೀರು ಇಮ್ಮಡಗೊಂಡನಹಳ್ಳಿ ಗ್ರಾಮದ ಸುತ್ತ ಹರಿಯುತ್ತಿದ್ದು, ಆ ಗ್ರಾಮ ಜಲದಿಗ್ಬಂಧನವಾಗಿದೆ. ಕಾಳೇನಹಳ್ಳಿ ಗ್ರಾಮದ ಶ್ರೀರಾಮಪ್ಪನವರ 12 ಕುರಿಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.