ADVERTISEMENT

ಕ್ಷೀಣಿಸದ ರಂಗಭೂಮಿ; ಹೆಚ್ಚಬೇಕಿದೆ ಪ್ರೇಕ್ಷಕರ ಸಂಖ್ಯೆ

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಬಿ.ಜಯಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 14:14 IST
Last Updated 25 ಅಕ್ಟೋಬರ್ 2019, 14:14 IST
ಸಂವಾದದ ನಂತರ ಬಿ.ಜಯಶ್ರೀ ಅವರನ್ನು ಸನ್ಮಾನಿಸಲಾಯಿತು.
ಸಂವಾದದ ನಂತರ ಬಿ.ಜಯಶ್ರೀ ಅವರನ್ನು ಸನ್ಮಾನಿಸಲಾಯಿತು.   

ತುಮಕೂರು: ರಂಗಭೂಮಿ ಬೆಳೆಯುತ್ತಿದೆ. ಅದಕ್ಕೆ ಕ್ಷೀಣಿಸುವ ಮಾತೇ ಇಲ್ಲ. ನೋಡುವ ಆಸಕ್ತರ ಸಂಖ್ಯೆ ಹೆಚ್ಚಾಗಬೇಕು ಅಷ್ಟೇ ಎಂದು ಹಿರಿಯ ಕಲಾವಿದೆ ಬಿ.ಜಯಶ್ರೀ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಯುವಬರಹಗಾರರ ಒಕ್ಕೂಟವು ನಗರದ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ರಂಗಭೂಮಿ ಕ್ಷೀಣಿಸುತ್ತಿದೆ ಎನಿಸುವುದಿಲ್ಲ. ಎಲ್ಲ ಕಡೆ ಸಾಕಷ್ಟು ನಾಟಕ ಪ್ರಯೋಗಗಳು ನಡೆಯುತ್ತಿವೆ. ಆದರೆ ನೋಡುಗರ ಸಂಖ್ಯೆ ಹೆಚ್ಚಬೇಕು. ಇದೇ ವೇಳೆ ಕನ್ನಡ ಭಾಷೆಯೂ ಕೂಡ ಮರೆ ಆಗುತ್ತಿಲ್ಲ. ಕನ್ನಡ ಭಾಷೆ ನಶಿಸುವ ಪ್ರಶ್ನೆಯೇ ಬರುವುದಿಲ್ಲ. ಕನ್ನಡ ಭಾಷೆ ಬೆಳೆಯುತ್ತದೆ ಎಂದರು.

ADVERTISEMENT

ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆ ಬಗ್ಗೆ ಹೆಚ್ಚೇನನ್ನೂ ಮಾತನಾಡಲಾರೆ. ಆದರೆ ಗುಬ್ಬಿ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಂತಹವು ಉತ್ತಮವಾಗಿಯೇ ನಡೆಯುತ್ತಿವೆ. ಕೆಲವು ಶಾಲೆಗಳಲ್ಲಿ ಉತ್ತಮ ವ್ಯವಸ್ಥೆ ಇದೆ ಎಂದು ಹೇಳಿದರು.

ಲೇಖಕಿ ಮಲ್ಲಿಕಾ ಬಸವರಾಜು, ಜಯಶ್ರೀ ಅವರನ್ನು ಕರೆಸಿರುವುದು ಒಳ್ಳೆಯದು ಎಂದರು. ಕಾವ್ಯ ಬದುಕನ್ನು ಮಾನವೀಯಗೊಳಿಸುತ್ತದೆ. ಕಾವ್ಯ ಓದುವುದರಿಂದ ಮನಸ್ಸು ಉಲ್ಲಾಸವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆವಹಿಸಿದ್ದರು. ಹಿರಿಯ ಕಲಾವಿದ ಲಕ್ಷ್ಮಣ್ ದಾಸ್ ಮಾತನಾಡಿದರು. ಎಸ್‌ವಿಎಸ್ ಶಿಕ್ಷಣ ಮಹಾವಿದ್ಯಾಲಯ, ಬಸವೇಶ್ವರ ಕಾಲೇಜು ಮತ್ತು ಅಕ್ಷಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

**

ರಾಜ್ಯಸಭೆ ಹೆಚ್ಚಿಸಿದ ಸಂಪರ್ಕ

‘ನಾನು ರಾಜ್ಯಸಭೆಗೆ ಆಯ್ಕೆ ಆದಾಗ ನನಗೆ ಯಾವುದೇ ಒಂದು ಕ್ಷೇತ್ರ ಇರಲಿಲ್ಲ. ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಪೂರ್ವ ಭಾಗದಿಂದ ಈಶಾನ್ಯ ರಾಜ್ಯಗಳವರೆಗೆ ನನ್ನ ಕ್ಷೇತ್ರ ವ್ಯಾಪ್ತಿ ಇತ್ತು. ನಾನು ರಾಜ್ಯಸಭೆ ಸದಸ್ಯೆಯಾದ ಮೇಲೆ ಸಾಕಷ್ಟು ಕಲಿತೆ. ಹಲವು ಮಂದಿ ಪಂಡಿತರು, ಪ್ರಶಸ್ತಿ ಪುರಸ್ಕೃತರನ್ನು ಭೇಟಿಯಾದೆ. ಇದರಿಂದ ನನಗೆ ಉತ್ತಮ ಸಂಪರ್ಕ ಬೆಳೆಯಿತು. ಸಂತೋಷವೂ ಆಯಿತು’ ಎಂದು ತಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.