ADVERTISEMENT

ಎಲ್ಲ ರೋಗಗಳಿಗೆ ಪ್ರಕೃತಿಯಲ್ಲಿದೆ ಔಷಧ

‘ಸಾಂಪ್ರದಾಯಿಕ ಪಶುಚಿಕಿತ್ಸೆ’ ಕುರಿತ ವಿಚಾರ ಸಂಕಿರಣ ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 10:01 IST
Last Updated 19 ಸೆಪ್ಟೆಂಬರ್ 2019, 10:01 IST
ಜೆ.ಸಿ.ಮಾಧುಸ್ವಾಮಿ ಅವರು ವಿಚಾರ ಸಂಕಿರಣ ಉದ್ಘಾಟಿಸಿದರು. ಜ್ಯೋತಿಗಣೇಶ್‌ ಇದ್ದರು.
ಜೆ.ಸಿ.ಮಾಧುಸ್ವಾಮಿ ಅವರು ವಿಚಾರ ಸಂಕಿರಣ ಉದ್ಘಾಟಿಸಿದರು. ಜ್ಯೋತಿಗಣೇಶ್‌ ಇದ್ದರು.   

ತುಮಕೂರು: ಪ್ರಕೃತಿಯಲ್ಲಿ ಪ್ರತಿ ರೋಗಕ್ಕೂ ಔಷಧಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕರ್ನಾಟಕ ಪಶುವೈದ್ಯಕೀಯ ಸಂಘ ಮತ್ತು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಾಂಪ್ರದಾಯಿಕ ಪಶುಚಿಕಿತ್ಸೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹಾಲು ಉತ್ಪಾದನೆ ರೈತರ ಉಪಕಸುಬಾಗಿದೆ. ಗರಿಷ್ಠ ಲಾಭವನ್ನು ಉಪಕಸುಬು ದೊರೆಕಿಸಿಕೊಡುತ್ತಿದೆ. ತುಮಕೂರಿನಂತಹ ಅರೆ ಬರಪೀಡಿತ ಜಿಲ್ಲೆಯಲ್ಲಿ 75 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹೈನುಗಾರಿಕೆ ಲಾಭದಾಯಕ ಆಗಬೇಕಾದರೆ ಕೃತಕ ಗರ್ಭಧಾರಣೆ ಮಾಡಿಸಬೇಕು. ತಳಿ ಉನ್ನತೀಕರಣ ಮಾಡಬೇಕು ಎಂದು ಹೇಳಿದರು.

ADVERTISEMENT

ಉತ್ಪಾದನಾ ವೆಚ್ಚ ಕಡಿಮೆಯಾದರೆ, ಲಾಭ ಹೆಚ್ಚುತ್ತದೆ. ಅದಕ್ಕಾಗಿಯೇ ತುಮುಲ್‍ನಿಂದ ತಳಿಗಳನ್ನು ಸಾಕಲು ಅಗತ್ಯ ಔಷಧ ಮತ್ತು ಪಶುಆಹಾರವನ್ನು ನೀಡಲಾಗುತ್ತಿದೆ. ಅನುಕರಣೆಯಿಂದ ನಮ್ಮ ಮೂಲದ ಹೈನು ಉತ್ಪಾದಕರು ನಶಿಸಿದರು ಎಂದರು.

ಪಾಶ್ಚಾತ್ಯ ಔಷಧದ ಮೊರೆ ಹೋಗುವ ಮೂಲಕ ನಮ್ಮ ಮೂಲವನ್ನು ಮರೆಯುತ್ತಿದ್ದೇವೆ. ನಮ್ಮ ಪರಂಪರೆಯಲ್ಲಿಯೇ ಸಿಗುವ ಪ್ರಕೃತಿ ದತ್ತವಾದ ಔಷಧಗಳನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ತಿಳಿಸಿದರು.

ಶಾಸಕ ಜ್ಯೋತಿಗಣೇಶ್, ಈಗಿರುವ ಚಿಕಿತ್ಸಾ ಪದ್ಧತಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ. ನಮ್ಮ ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಅಗತ್ಯವಾದ ಸಂಶೋಧನೆಯನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್, ಶಿರಾಗೇಟ್‍ನಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಂಡು 2 ವರ್ಷ ಕಳೆದರೂ ಉದ್ಘಾಟನೆಯಾಗದೆ ನನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ತಜ್ಞ ವೈದ್ಯರಿದ್ದು, ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸುವ ಮೂಲಕ ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಮನವಿ ಮಾಡಿದರು.

ಪಶುವೈದ್ಯಕೀಯ ತಜ್ಞ ಪಿ.ಮನೋಹರ್ ಉಪಾಧ್ಯ, ಪಶುಇಲಾಖೆ ಉಪನಿರ್ದೇಶಕ ಎಲ್.ಪ್ರಕಾಶ್, ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಂ.ನಾಗಭೂಷಣ, ಉಪಾಧ್ಯಕ್ಷ ಎ.ಸಿ.ದಿವಾಕರ್, ಮಹದೇವಯ್ಯ, ಬಿ.ಆರ್.ನಂಜೇಗೌಡ, ಡಾ.ಶಶಿಕಲಾ ಎಚ್., ಡಾ.ಶಶಿಕಾಂತ್ ಬೂದಿಹಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.