ADVERTISEMENT

ತುಮಕೂರು: ದೇವರಿಗಾಗಿ ಜೆಡಿಎಸ್– ಬಿಜೆಪಿ ಗುದ್ದಾಟ

ನಿಷೇಧಾಜ್ಞೆ ಜಾರಿ, ಪೊಲೀಸ್ ಭದ್ರತೆ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 14:18 IST
Last Updated 16 ಜನವರಿ 2023, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ಲಿಂಗಾಪುರದಲ್ಲಿ ಶನಿಮಹಾತ್ಮ ದೇವರ ಮೆರವಣಿಗೆ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಗುಂಪುಗಳ ನಡುವೆ ಗದ್ದಲ ಉಂಟಾಗಿದ್ದು, ಗ್ರಾಮದಲ್ಲಿ ಭಾನುವಾರ ರಾತ್ರಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

‘ಮೊದಲು ನಾವು ದೇವರನ್ನು ಪೂಜಿಸಿ, ಮೆರವಣಿಗೆ ಮಾಡುತ್ತೇವೆ. ನಮಗೆ ದೇವರು ಕೊಡಬೇಕು’ ಎಂದು ಬಿಜೆಪಿ ಕಡೆಯ ಗುಂಪು ಪಟ್ಟು ಹಿಡಿದಿದೆ. ಇದಕ್ಕೆ ಜೆಡಿಎಸ್ ಕಡೆಯವರು ಒಪ್ಪಿಲ್ಲ. ಮೊದಲಿನಿಂದಲೂ ದೇವರನ್ನು ಗ್ರಾಮದ ಜನರು ಒಟ್ಟಾಗಿ ಪೂಜಿಸಿ, ಮೆರವಣಿಗೆ ಮಾಡಿಕೊಂಡು ಬಂದಿದ್ದೇವೆ. ಅದರಂತೆ ನಮ್ಮ ಕಡೆಯಿಂದಲೇ ಮೊದಲು ಪೂಜೆ ನಡೆಯಬೇಕು ಎಂದು ಬಿಗಿ ಪಟ್ಟು ಹಾಕಿದ್ದಾರೆ.

ಭಾನುವಾರ ರಾತ್ರಿ ಎರಡೂ ಗುಂಪುಗಳ ನಡುವೆ ಪರಸ್ಪರ ವಾಗ್ವಾದ, ಮಾತಿನ ಚಕಮಕಿ, ಸಣ್ಣಪುಟ್ಟ ಘರ್ಷಣೆಗಳು ಸಂಭವಿಸಿವೆ. ಹೆಬ್ಬೂರು ಠಾಣೆ ಸಬ್‌ಇನ್ಸ್‌ಪೆಕ್ಟರ್ ದೇವಿಕಾ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಸಿದರೂ ಅದಕ್ಕೆ ಎರಡೂ ಕಡೆಯ ಗುಂಪು ಒಪ್ಪಿಲ್ಲ. ಬೆಳಗಿನ ಜಾವ 2 ಗಂಟೆಯವರೆಗೂ ಮಾತುಕತೆ ನಡೆಸಿದರೂ ಯಾರೊಬ್ಬರೂ ಪಟ್ಟು ಸಡಿಲಿಸಿಲ್ಲ. ಕೊನೆಗೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

ಹಿನ್ನೆಲೆ: 1968ರಲ್ಲಿ ಶಿವಣ್ಣ ಎಂಬುವರು ದಾನ ನೀಡಿದ ನಿವೇಶನದಲ್ಲಿ ಶನಿಮಹಾತ್ಮ ದೇವಸ್ಥಾನ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ಜಮೀನಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದ್ದರಿಂದ ಶನಿಮಹಾತ್ಮ ದೇವರನ್ನು ಗ್ರಾಮದಲ್ಲಿದ್ದ ಪಾಂಡುರಂಗಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇಡಲಾಗಿತ್ತು. ಸಕಾಲಕ್ಕೆ ಬಾಗಿಲು ತೆಗೆದು ಪೂಜೆ ಸಲ್ಲಿಸಲು ಸಾಧ್ಯವಾಗದಿರುವುದು, ಒಡವೆಗಳ ವಿಚಾರದಲ್ಲಿ ಮತ್ತೆ ಅಲ್ಲೂ ಸಮಸ್ಯೆ ಉಂಟಾಗಿತ್ತು. ಕೊನೆಗೆ ಪೂಜಾರಿ ಮನೆಯ ಬಳಿಗೆ ತೆಗೆದುಕೊಂಡು ಹೋಗಿ ದೇವರನ್ನು ಪೂಜಿಸಿಕೊಂಡು ಬರುತ್ತಿದ್ದರು.

ಇಷ್ಟು ದಿನಗಳ ಕಾಲ ಯಾರಿಗೂ ಬೇಡವಾಗಿದ್ದ ದೇವರು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲರಿಗೂ ಬೇಕಾಗಿದೆ. ದೇವರ ಉತ್ಸವ ಮಾಡುವುದು ರಾಜಕೀಯ ತಿರುವು ಪಡೆದುಕೊಂಡಿದ್ದು ಜೆಡಿಎಸ್, ಬಿಜೆಪಿ ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.