ADVERTISEMENT

ದುರಾಡಳಿತ ಸರ್ಕಾರ: ಜೆಡಿಎಸ್‌ ಟೀಕೆ

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 4:23 IST
Last Updated 5 ಆಗಸ್ಟ್ 2025, 4:23 IST
<div class="paragraphs"><p>ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಜೆಡಿಎಸ್‌ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮುಖಂಡರಾದ ಆರ್.ಸಿ.ಆಂಜನಪ್ಪ, ಕೆ.ಎಂ.ತಿಮ್ಮರಾಯಪ್ಪ,</p></div>

ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಜೆಡಿಎಸ್‌ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮುಖಂಡರಾದ ಆರ್.ಸಿ.ಆಂಜನಪ್ಪ, ಕೆ.ಎಂ.ತಿಮ್ಮರಾಯಪ್ಪ,

   

ತುಮಕೂರು: ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದು ದುರಾಡಳಿತ ಸರ್ಕಾರ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್‌ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಅಶೋಕ ರಸ್ತೆಯ ಜೆಡಿಎಸ್‌ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ನೂರಾರು ಜನ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

‘2 ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರ ಲಂಚಗುಳಿತನ, ದುರಾಡಳಿತ, ಆಡಳಿತ ವೈಫಲ್ಯತೆಯಿಂದ ಜನರ ಆಕ್ರೋಶಕ್ಕೆ ತುತ್ತಾಗಿದೆ. ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಪೂರೈಸುವಲ್ಲಿ ವಿಫಲವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗೊಬ್ಬರ ದಾಸ್ತಾನು ಮಾಡದೆ ನಿರ್ಲಕ್ಷ ವಹಿಸಿದೆ. ಈಗ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನಾಯಕರಿಗೆ ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವೆ ಅಧಿಕಾರ ಬಿಟ್ಟು ತೊಲಗಲಿ ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ‘ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ರೈತರು ರಸಗೊಬ್ಬರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಕೇಂದ್ರ ಸರಬರಾಜು ಮಾಡಿದ್ದ ರಸಗೊಬ್ಬರ ರೈತರಿಗೆ ಹಂಚಿಕೆ ಮಾಡದೆ, ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿದೆ’ ಎಂದು ದೂರಿದರು.

ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ವಿಜಯ್‍ಗೌಡ, ಮುಖಂಡರಾದ ಜಗದೀಶ್‌ ನಾಗರಾಜಯ್ಯ, ಬಿ.ಎಸ್.ನಾಗರಾಜು, ಕೆ.ಟಿ.ಶಾಂತಕುಮಾರ್‌, ಉಗ್ರೇಶ್, ಕಾಮರಾಜು, ಕೊಂಡವಾಡಿ ಚಂದ್ರಶೇಖರ್‌, ತಿಮ್ಮಾರೆಡ್ಡಿ, ಸೋಲಾರ್‌ ಕೃಷ್ಣಮೂರ್ತಿ, ಗಂಗಣ್ಣ, ಕೆಂಪರಾಜು, ಭೈರೇಶ್, ಕಳ್ಳಿಪಾಳ್ಯ ಲೋಕೇಶ್, ಯೋಗಾನಂದಕುಮಾರ್, ಟಿ.ಕೆ.ನರಸಿಂಹಮೂರ್ತಿ, ಧರಣೇಂದ್ರಕುಮಾರ್, ಎಚ್.ಡಿ.ಕೆ.ಮಂಜುನಾಥ್, ರಾಮಕೃಷ್ಣಪ್ಪ, ಮೆಡಿಕಲ್ ಮಧು, ರೇಖಾ ರಾಜು, ಸೊಗಡು ವೆಂಕಟೇಶ್, ಚೆನ್ನಮಲ್ಲಯ್ಯ, ದೊಡ್ಡೇರಿ ಬಸವರಾಜು, ಮಧುಗೌಡ, ವಿಶ್ವೇಶ್ವರಯ್ಯ, ತಾಹೇರಾ ಕುಲ್ಸಂ, ಲೀಲಾವತಿ, ಲಕ್ಷ್ಮಿದೇವಮ್ಮ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.