ADVERTISEMENT

ತುಮಕೂರು | ಮಕ್ಕಳಲ್ಲಿ ಅಪರಾಧ ಪ್ರವೃತ್ತಿ ಹೆಚ್ಚಳ: ಜಿ.ಪರಮೇಶ್ವರ

ಶಿಕ್ಷಕರ ದಿನಾಚರಣೆ; ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:06 IST
Last Updated 6 ಸೆಪ್ಟೆಂಬರ್ 2025, 5:06 IST
<div class="paragraphs"><p>ತುಮಕೂರಿನಲ್ಲಿ ಶುಕ್ರವಾರ ರಾಧಾಕೃಷ್ಣನ್‌ ಜನ್ಮದಿನದ ಕಾರ್ಯಕ್ರಮ</p></div>

ತುಮಕೂರಿನಲ್ಲಿ ಶುಕ್ರವಾರ ರಾಧಾಕೃಷ್ಣನ್‌ ಜನ್ಮದಿನದ ಕಾರ್ಯಕ್ರಮ

   

ತುಮಕೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ಕೊಲೆ, ಅತ್ಯಾಚಾರ, ದರೋಡೆಯಂತಹ ಹೀನ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕಳವಳ ವ್ಯಕ್ತಪಡಿಸಿದರು.

ನಗರ ಹೊರ ವಲಯದ ಅಗಳಕೋಟೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ವಿದ್ಯಾರ್ಥಿ ಸಮಾಜದ ಪ್ರತಿಬಿಂಬ. ಅವರನ್ನು ಶಿಕ್ಷಕರು ತಯಾರು ಮಾಡುತ್ತಾರೆ. ಆದರೆ 14ರಿಂದ 17 ವರ್ಷದವರು ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿರುವುದು ಆತಂಕ ತರಿಸಿದೆ ಎಂದರು.

‘ಮೂರನೇ ಬಾರಿಗೆ ರಾಜ್ಯದ ಗೃಹ ಸಚಿವನಾಗಿದ್ದೇನೆ. ಮಂತ್ರಿಯಾಗಿ ಪ್ರತಿ ದಿ‌ನ ಬೆಳಿಗ್ಗೆ ಕೊಲೆ, ಅತ್ಯಾಚಾರದ ವಿಚಾರ ಕೇಳಬೇಕಾಗುತ್ತಿದೆ. 8ನೇ ತರಗತಿ ವಿದ್ಯಾರ್ಥಿ ಪಕ್ಕದ ಮನೆ ಮಹಿಳೆಯನ್ನು ಕೊಲೆ ಮಾಡುತ್ತಾನೆ. ಅವನ ಮನಸ್ಥಿತಿ ಹೇಗಿರಬೇಕು? ಯಾವ ಶಾಲೆಯಲ್ಲಿ ಅವನು‌ ಕಲಿಯಬಹುದು, ಯಾವ ಶಿಕ್ಷಕ ಅವನಿಗೆ ಪಾಠ ಹೇಳಬಹುದು?’ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ದೊರೆತು 78 ವರ್ಷ ಆಗಿದೆ. ಸಂವಿಧಾನದ ಪೀಠಿಕೆಯಲ್ಲಿ ಸಮಾನತೆ, ಭ್ರಾತೃತ್ವ, ಸಹೋದರತ್ವ ಪ್ರತಿಪಾದಿಸಲಾಗಿದೆ. ಈಗ ಎಲ್ಲರಿಗೂ ಸಮಾನತೆ ಸಿಕ್ಕಿದೆಯಾ? ಇತಿಹಾಸ ಗಮನಿಸಿದರೆ ಕೇವಲ ಒಂದು ವರ್ಗಕ್ಕೆ ಮಾತ್ರ ಶಿಕ್ಷಣ ಸೀಮಿತವಾಗಿತ್ತು. ಹೀಗಾದರೆ ಪ್ರತಿಯೊಬ್ಬರು ಪ್ರಜ್ಞಾವಂತರಾಗಲು ಹೇಗೆ ಸಾಧ್ಯ? ಪ್ರಜ್ಞೆ ಯಾರಪ್ಪನ ಸ್ವತ್ತು. ಆ ಪ್ರಜ್ಞೆ ನಿಮಗೆ ಆಗಬಾರದು ಎಂದರೆ ಎಂತಹ ಸಮಾಜ ಕಟ್ಟುತ್ತಿದ್ದೇವೆ ಎಂದೂ ಪ್ರಶ್ನೆ ಎತ್ತಿದರು.

ಇದುವರೆಗೆ ದೇಶದಲ್ಲಿ ಸಂಸ್ಕೃತ ಭಾಷೆ ಎಲ್ಲರಿಗೂ ಸಮಾನವಾಗಿ ಸಿಗಲಿಲ್ಲ. ನಾನು ಪಿಎಚ್.ಡಿ ಮಾಡಿದರೂ ಸಂಸ್ಕೃತ ಭಾಷೆಯ ಇತಿಹಾಸ ತಿಳಿಯಲು ಆಗಲಿಲ್ಲ. ಆಧುನಿಕ ಭಾರತದಲ್ಲಿ ಸಂಸ್ಕೃತ ಎಲ್ಲರಿಗೂ ಸಿಗುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಿರುವುದು ಬಹಳ ಸಂತೋಷ ಎಂದರು.

ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ವಿದ್ಯಾರ್ಥಿಯನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಬೇಕು. ಸರ್ವಪಲ್ಲಿ ರಾಧಾಕೃಷ್ಣನ್‌ ಹುಟ್ಟಿದ ದಿನ ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತೇವೆ. ಅವರೊಬ್ಬ ಶ್ರೇಷ್ಠ ತತ್ವಜ್ಞಾನಿ. ಅವರ ನಡೆ, ನುಡಿ,‌ ಆಚಾರ ಇತರರಿಗೆ ಆದರ್ಶ ಎಂದು ಬಣ್ಣಿಸಿದರು.

ಶಾಸಕ ಬಿ.ಸುರೇಶ್‌ಗೌಡ, ‘ರಾಷ್ಟ್ರೀಯ ಸಾಧನಾ ಸಮೀಕ್ಷೆಯಲ್ಲಿ ಶಾಲೆಗಳ ಗುಣಮಟ್ಟ ಅಧ್ಯಯನ ಮಾಡಲಾಯಿತು. ಸಮೀಕ್ಷೆಯ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕದ ಹೆಸರಿಲ್ಲ. ಉತ್ತಮ ಸಾಧನೆಯ ಶಾಲೆ ಪಟ್ಟಿಯಲ್ಲಿ ರಾಜ್ಯದ ಯಾವುದೇ ಜಿಲ್ಲೆ ಇರಲಿಲ್ಲ. ಕಲಿಕೆ ಪ್ರಮಾಣದಲ್ಲೂ ಮಕ್ಕಳು ಹಿಂದಿದ್ದಾರೆ’ ಎಂದರು.

ಈಚೆಗೆ ಫಿನ್‌ಲೆಂಡ್‌ಗೆ ಭೇಟಿ ನೀಡಿದ್ದೆ, ಅಲ್ಲಿನ ಪ್ರಾಥಮಿಕ ಶಿಕ್ಷಣ ಪದ್ಧತಿ ಪ್ರಪಂಚಕ್ಕೆ ಮಾದರಿಯಾಗಿದೆ. ಅಲ್ಲಿ ಖಾಸಗಿ ಶಾಲೆಗಳಿಲ್ಲ, ರಾಷ್ಟ್ರಪತಿ, ಪ್ರಧಾನಿ ಮಕ್ಕಳು ಸಹ ಸರ್ಕಾರಿ ಶಾಲೆಯಲ್ಲಿಯೇ ಓದಬೇಕು. ಅಲ್ಲಿಂದ ಬಂದ ನಂತರ ಮುಖ್ಯಮಂತ್ರಿ, ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಫಿನ್‌ಲೆಂಡ್‌ ದೇಶದ ಮಾದರಿ ಅಳವಡಿಕೆಗೆ ಅವರ ಜತೆ ಒಡಂಬಡಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ, ಡಿಡಿಪಿಐ ಕೆ.ಜೆ.ರಘುಚಂದ್ರ, ಬಿಇಒ ಎಂ.ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಇ.ರಮೇಶ್, ರುಪ್ಸಾ ಅಧ್ಯಕ್ಷ ಹಾಲನೂರು ಎಸ್.ಲೇಪಾಕ್ಷ್, ಶಿಕ್ಷಕರ ಸಂಘದ ಪ್ರಮುಖರಾದ ಎಸ್.ಪಿ.ಸಿದ್ಧಲಿಂಗಸ್ವಾಮಿ, ಆರ್.ಪರಶಿವಮೂರ್ತಿ, ಉಮೇಶ್, ಎಚ್.ಎಸ್.ನಾಗರಾಜು, ಜಿ.ವಿ.ಗೋವಿಂದರಾಜು, ಎಚ್.ಸಿ.ಸತ್ಯಪ್ರಕಾಶ್, ಪಿ.ಎಸ್.ಅನುಸೂಯದೇವಿ, ಎಚ್.ಎಸ್.ದೊಡ್ಡರಂಗಪ್ಪ, ಜಗದೀಶ್, ಬಿ.ಎಚ್.ಲೋಕೇಶ್ ರೆಡ್ಡಿ, ಪಿ.ಜಿ.ತಿಮ್ಮೇಗೌಡ, ಕೆ.ಎಚ್.ಲೋಕೇಶ್, ಸಿದ್ದಮ್ಮ, ಹೆಗ್ಗೆರೆ ಗ್ರಾ.ಪಂ ಅಧ್ಯಕ್ಷ ರೇವಣ್ಣ ಭಾಗವಹಿಸಿದ್ದರು.

ತುಮಕೂರಿನಲ್ಲಿ ಶುಕ್ರವಾರ ರಾಧಾಕೃಷ್ಣನ್‌ ಜನ್ಮದಿನದ ಕಾರ್ಯಕ್ರಮದಲ್ಲಿ ರುಪ್ಸಾ ವತಿಯಿಂದ ಖಾಸಗಿ ಶಾಲೆ ಶಿಕ್ಷಕರನ್ನು ಸನ್ಮಾನಿಸಲಾಯಿತು

ತುಮಕೂರಿನಲ್ಲಿ ಶುಕ್ರವಾರ ನಡೆದ ರಾಧಾಕೃಷ್ಣನ್‌ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು
ಗುರು ಭವನ ನಿರ್ಮಾಣಕ್ಕೆ ₹9 ಕೋಟಿ ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಆದಷ್ಟು ಶೀಘ್ರ ಅಡಿಗಲ್ಲು ಹಾಕಲಾಗುವುದು
ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ
4500 ಶಾಲಾ ಕಾಮಗಾರಿ
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 4500 ಶಾಲಾ ಕಾಮಗಾರಿ ನಡೆಸಲಾಗಿದೆ. ಎರಡೂವರೆ ವರ್ಷದಲ್ಲಿ ಶಾಲಾಭಿವೃದ್ಧಿಗೆ ₹250 ಕೋಟಿ ವೆಚ್ಚದ ಮಾಡಲಾಗಿದೆ. 400 ಶಾಲಾ ಕೊಠಡಿ 1500 ಕಾಂಪೌಂಡ್ 900 ಶೌಚಾಲಯ 700 ಶಾಲಾ ಆವರಣ ಅಭಿವೃದ್ಧಿ ಪಡಿಸಲಾಗಿದೆ. ಜಿ.ಪ್ರಭು ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.