ಗುಬ್ಬಿ: ಶೀಘ್ರದಲ್ಲಿಯೇ ಪ್ರಾರಂಭವಾಗುವ ಜಾತಿ ಗಣತಿಯಲ್ಲಿ ಕಾಡುಗೊಲ್ಲ ಸಮುದಾಯದವರು ‘ಕಾಡುಗೊಲ್ಲ’ ಎಂದು ನಮೂದಿಸಬೇಕು ಎಂದು ಹೆಗ್ಗುಂದ ಮಠದ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಜಾತಿಗಣತಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಡುಗೊಲ್ಲ ಸಮುದಾಯ ತನ್ನ ವಿಶಿಷ್ಟ ಆಚರಣೆಗಳಿಂದಾಗಿ ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲ ಲಕ್ಷಣಗಳನ್ನು ಒಳಗೊಂಡಿದೆ. ಕಾಡುಗೊಲ್ಲರು ಅಲೆಮಾರಿಗಳಾಗಿ ಪಶುಪಾಲನೆ, ಮೇಕೆ, ಕುರಿ ಸಾಕಾಣಿಕೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.
ಕಾಡುಗೊಲ್ಲ ಸಮುದಾಯಕ್ಕೆ ಪುರಾತನ ಇತಿಹಾಸವಿದ್ದು, ಒಗ್ಗಟ್ಟಿನ ಕೊರತೆಯಿಂದಾಗಿ ಸಮುದಾಯಕ್ಕೆ ಸಿಗಬೇಕಾಗಿರುವ ಮೀಸಲಾತಿ ಇಲ್ಲವಾಗುತ್ತಿದೆ. ಪರಿಸ್ಥಿತಿ ಅರಿತು ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಸಮುದಾಯದ ಹಿತದೃಷ್ಟಿಯಿಂದ ಒಗ್ಗೂಡಬೇಕಿದೆ. ಈಗ ಮೈಮರೆತಲ್ಲಿ ಮುಂದೆ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಸಮುದಾಯದವರು ಅರಿತು ಕೊಳ್ಳಬೇಕು ಎಂದು ತಿಳಿಸಿದರು.
ಮುಖಂಡ ಬಿ.ದೊಡ್ಡಯ್ಯ ಮಾತನಾಡಿ, ಕಾಡುಗೊಲ್ಲ ಸಮುದಾಯವು ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದು ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ಹೊಂದಿರುವುದರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಿದೆ. ಸಮುದಾಯದವರಲ್ಲಿ ಅರಿವು ಮೂಡಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು ಎಲ್ಲರೂ ಕಡ್ಡಾಯವಾಗಿ ಕಾಡುಗೊಲ್ಲ ಎಂದೇ ನಮೂದಿಸುವಂತೆ ತಿಳಿಸಿದರು.
ದೊಡ್ಡೇಗೌಡ ಮಾತನಾಡಿ, ಕಾಡುಗೊಲ್ಲರ ಅಸ್ತಿತ್ವದ ಬಗ್ಗೆ ಧ್ವನಿಯಾದ ರಾಜ್ಯ ಕಾಡುಗೊಲ್ಲರ ಸಂಘವು ಈಗ ಗಣತಿಯ ಜಾಗೃತಿಗೆ ಮುಂದಾಗಿದೆ ಎಂದರು.
ಕಂಬೇರಹಟ್ಟಿ ನಾಗರಾಜು, ಜಿ.ಪಂ. ಮಾಜಿ ಸದಸ್ಯೆ ಯಶೋಧಮ್ಮ, ಶಿವಣ್ಣ, ನಾಗರಾಜು, ಈಶ್ವರಪ್ಪ, ಬಸವರಾಜು, ಬಾಲರಾಜು, ಬಸವರಾಜು, ರವೀಶ್, ನಾಗರಾಜು, ಅಯ್ಯಣ್ಣ, ಮಂಜುನಾಥ್, ನಿಂಗರಾಜು, ಮಹಾಲಿಂಗಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.