
ಪಾವಗಡ: ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ. ಅವರು ಸಮಾಜದ ದಾರ್ಶನಿಕರು ಎಂದು ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.
ತಾಲ್ಲೂಕಿನ ಅಚ್ಚಮ್ಮನ್ನಹಳ್ಳಿಯಲ್ಲಿ ಭಾನುವಾರ ನಡೆದ ಕನಕದಾಸರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಸಮಾಜದ ಅಭಿವೃದ್ಧಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಸಮುದಾಯದ ಜನರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ವಿದ್ಯಾವಂತರನ್ನಾಗಿ ರೂಪಿಸಬೇಕು ಎಂದು ಸಲಹೆ ಮಾಡಿದರು.
ಆಂಧ್ರಪ್ರದೇಶದ ಮಾಜಿ ಸಚಿವ ಶಂಕರ್‌ನಾರಾಯಣ, ‘ಕುರುಬ ಸಮುದಾಯದವರು ಸಾಮಾಜಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು’ ಎಂದು ತಿಳಿಸಿದರು.
ರಾಯಚರ್ಲು ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಆರ್.ಪಿ.ಸಾಂಬಸದಾಶಿವ ರೆಡ್ಡಿ, ‘ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಮೊದಲ ಬಾರಿಗೆ ಹಾವೇರಿಯಲ್ಲಿ ಕಾಗಿನೆಲೆ ಮಠ ಸ್ಥಾಪಿಸಲಾಯಿತು. ನಂತರ ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲೂ ಮಠ ಆರಂಭಿಸಲಾಯಿತು. ಮಠದ ಸ್ವಾಮೀಜಿಗಳು ಕನಕದಾಸರ ವಿಚಾರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಕುರುಬರ ಡೊಳ್ಳು ಸಂಸ್ಕೃತಿ ಮರೆಯಾಗಿ, ಡಿ.ಜೆ ಬಳಕೆ ಹೆಚ್ಚಾಗುತ್ತಿದೆ’ ಎಂದು ವಿಷಾದಿಸಿದರು.
ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಂದ್ರಪ್ಪ, ‘ಕನಕದಾಸರ ಜಯಂತಿ ಹಬ್ಬಕ್ಕೆ ಸೀಮಿತವಾಗದೆ ಅವರ ವಿಚಾರ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕನಕದಾಸರ ಪುಸ್ತಕ ಅಧ್ಯಯನ ನಡೆಸುವ ಮೂಲಕ ಅವರ ತತ್ವ, ಆದರ್ಶ ಪಾಲಿಸಬೇಕು’ ಎಂದರು.
ಮಾಜಿ ಶಾಸಕ ತಿಮ್ಮರಾಯಪ್ಪ, ತುಮಕೂರು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಮುಖಂಡ ರಾಮಚಂದ್ರರೆಡ್ಡಿ, ಬಿಲ್ಲೆ ಶಂಕರಪ್ಪ, ಕೋಟೆ ಕುಮಾರ್, ಅಡ್ರ ಶಂಕರಪ್ಪ, ನಾಗಾರ್ಜುನ, ನಾರಾಯಣಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.