ADVERTISEMENT

ಮಹಿಳೆಯರ ಓದಿಗೆ ಪುರುಷರು ಕಿವಿಗೊಡಿ

‘ಮಹಿಳೆಯರ ಓದುವ ಹವ್ಯಾಸ ಒಂದು ಚರ್ಚೆ’ಯಲ್ಲಿ ನಟರಾಜ್ ಬೂದಾಳ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 14:18 IST
Last Updated 9 ಜುಲೈ 2019, 14:18 IST
ಗಿಡ ನೆಡುವ ಮೂಲಕ ವಸುಂಧರಾ ಭೂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಗಿಡ ನೆಡುವ ಮೂಲಕ ವಸುಂಧರಾ ಭೂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ತುಮಕೂರು: ಪುಸ್ತಕಗಳನ್ನು ಓದುವುದರಿಂದ ತಿಳಿವಳಿಕೆಯ ಜತೆಗೆ ರಸವೂ ಮತ್ತು ಜೀವ ಚೈತನ್ಯವೂ ದೊರೆಯುತ್ತದೆ. ಹೀಗಾಗಿ ಮಹಿಳೆಯರ ಬರಹ ಮತ್ತು ಓದನ್ನು ಪುರುಷರು ಕಿವಿಗೊಟ್ಟು ಕೇಳಿಸಿಕೊಳ್ಳಬೇಕು ಎಂದು ವಿಮರ್ಶಕ ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.

ಕೊರಟಗೆರೆ ತಾಲೂಕಿನ ಹೊಲತಾಳು ಗ್ರಾಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ‘ಮಹಿಳೆಯರ ಓದುವ ಹವ್ಯಾಸ’ ಒಂದು ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನ ಶ್ರೇಷ್ಠ ಕೃತಿಗಳೆಲ್ಲವೂ ಮಹಿಳೆಯ ಒಂದು ಭಾಗ. ಪ್ರತಿ ಹೆಣ್ಣು ಕೂಡ ಒಂದೊಂದು ಕಾವ್ಯ. ಆದ್ದರಿಂದ ಅರ್ಧನಾರೀಶ್ವರ ಕಲ್ಪನೆಯಲ್ಲಿ ಹೆಣ್ಣನ್ನು ಅರ್ಧ ಕಾವ್ಯದಂತೆ ನೋಡಬೇಕಾಗಿದೆ. ಇದುವರೆಗೆ ಹೆಣ್ಣಿನ ಧ್ವನಿ ಕೇಳಿಸಿಕೊಳ್ಳುವ ಪ್ರಯತ್ನವನ್ನು ಪುರುಷ ಮಾಡಿಲ್ಲ. ಮಹಿಳೆ ಒಂದು ಕಾವ್ಯವೆಂಬುದು ತಿಳಿದಿದ್ದರೂ ಆಕೆಯನ್ನು ನಿರ್ಲಕ್ಷಿಸಿಕೊಂಡು ಬರಲಾಗಿದೆ. ಈಗಲಾದರೂ ಪುರುಷರು ಮಹಿಳೆಯ ಮಾತುಗಳನ್ನು ಕೇಳಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕವಯಿತ್ರಿ ಲಲಿತ ಸಿದ್ದಬಸವಯ್ಯ, ‘ಕವಿತೆ ಮಹಿಳೆಯರ ಬದುಕಿನ ಅನಾವಣ ಮಾಡುತ್ತವೆ. ಹೆಣ್ಣು, ರಾಗಿ ಮಾಡುವಾಗ, ಹೆಗ್ಗಲಿಸುವ ರೀತಿ, ರಾಗ, ತಾಳ, ಲಯ ಅದ್ಭುತವಾದ ಕ್ರಿಯೆ. ಅಷ್ಟೇ ಅಲ್ಲ, ರಾಗಿಯನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಅಲ್ಲಿ ಕೇರುವುದು, ಒನೆಯುವುದು, ಹೆಗ್ಗಲಿಸುವುದು ಮಾಡುತ್ತಿದ್ದರೆ ರಾಗಿ ನರ್ತನ ಮಾಡುತ್ತವೆ. ಅದೇ ಒಂದು ದೊಡ್ಡ ಕಾವ್ಯ. ಆ ಕಾವ್ಯವನ್ನು ನಾವು ಓದಬೇಕು. ಈ ಪ್ರಕ್ರಿಯೆಯನ್ನು ಪುಸ್ತಕದಿಂದ ಓದಿ ತಿಳಿದುಕೊಳ್ಳಲು ಸಾಧ್ಯವಿಲ್ಲ’ ಎಂದು ವಿಶ್ಲೇಷಿಸಿದರು.

ತತ್ವಪದಕಾರರು ಮತ್ತು ಮಹಿಳೆಯರ ಕೆಲಸವನ್ನು ಕೇವಲ ಅಕ್ಷರಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವುಗಳ ಕ್ರಮ ಅರ್ಥ ಮಾಡಿಕೊಳ್ಳಬೇಕು. ಪುರುಷರಿಂದ ನಿರ್ದೇಶಿತವಾದ ಓದು, ಓದಲ್ಲ. ಮಗುವಿನ ಅಂದ ಚಂದವನ್ನು ವರ್ಣಿಸುವ ಮಹಿಳೆಯರು ಸ್ವಂತದ್ದನ್ನು ಮಾತಾಡಿದ್ದೇ ಇಲ್ಲ. ಅಂತಹ ಕಾವ್ಯವನ್ನು ಓದಲಿಕ್ಕೆ ಬಿಟ್ಟಿಲ್ಲ. ಅಷ್ಟೇ ಅಲ್ಲ ನಾವು ಕೇಳಿಸಿಕೊಂಡಿಲ್ಲ. ಕೇಳಿಸಿಕೊಳ್ಳುವ ತಾಳ್ಮೆಯೂ ನಮ್ಮಲ್ಲಿ ಇಲ್ಲ ಎಂದು ತಿಳಿಸಿದರು.

ಹೊಸಗನ್ನಡದ ಸಂದರ್ಭದಲ್ಲಿ ಪಿ.ಲಂಕೇಶ್ ಮತ್ತು ಎಡಪಂಥೀಯರ ಪ್ರಭಾವಕ್ಕೆ ಒಳಗಾದ ಹಲವು ಲೇಖಕಿಯರು ಈ ಲೋಕವನ್ನು ಮತ್ತೊಂದು ರೀತಿ ನೋಡುತ್ತೇವೆ. ಎಲ್ಲವನ್ನು ಸಮಾನವಾಗಿ ನೋಡುತ್ತೇವೆ ಎಂದು ಬರೆದಿದ್ದಾರೆ. ಅವುಗಳನ್ನು ಸರಿಯಾಗಿ ಪುರುಷರು ಓದಿಲ್ಲ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿದರು. ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಮರಿಯಂಬಿ, ಅಕ್ಷತಾ, ಪದ್ಮಾ ಕೃಷ್ಣಮೂರ್ತಿ, ರತ್ನ ಬಡವನಹಳ್ಳಿ, ಜಯಲಕ್ಷ್ಮಿಗುಪ್ತ, ನಳಿನಾ, ಚೇತನಾ, ಮೇಘನಾ, ವೀಣಾ ಶ್ರೀನಿವಾಸ್, ಸವಿತಾ, ಸುಗುಣಾ ದೇವಿ, ಸಿ.ಎಲ್.ಸುನಂದಮ್ಮ, ಸಿ.ಎ.ಇಂದಿರಾ ಅವರು ‘ನನ್ನ ಮೆಚ್ಚಿನ ಪುಸ್ತಕ’ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.