ADVERTISEMENT

ಕನ್ನಡ ಮಾಧ್ಯಮ ಶಾಲೆಗಳು ಕಣ್ಮರೆ: ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ವಿಷಾದ

ಕನ್ನಡ ಭವನದಲ್ಲಿ ನಡೆದ ‘ಪ್ರತಿಭಾ ಪುರಸ್ಕಾರ ಕಾರ್ಯಕ್ರಮ’ದಲ್ಲಿ ಅನ್ನಪೂರ್ಣ ವೆಂಕಟ ನಂಜಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 13:36 IST
Last Updated 16 ಡಿಸೆಂಬರ್ 2018, 13:36 IST
ಕಾರ್ಯಕ್ರಮವನ್ನು ಬಾ.ಹ.ರಮಾಕುಮಾರಿ ಹಾಗೂ ಅನ್ನಪೂರ್ಣ ವೆಂಕಟನಂಜಪ್ಪ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಬಾ.ಹ.ರಮಾಕುಮಾರಿ ಹಾಗೂ ಅನ್ನಪೂರ್ಣ ವೆಂಕಟನಂಜಪ್ಪ ಉದ್ಘಾಟಿಸಿದರು   

ತುಮಕೂರು: ಇಂಗ್ಲಿಷ್‌ ಶಿಕ್ಷಣದಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಆದರೂ ಸರ್ಕಾರ ಈ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ವಿಷಾದಿಸಿದರು.

ನಗರದ ಕನ್ನಡಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದ ವಾಸಿಗಳು ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಮರೆಯುತ್ತಿದ್ದಾರೆ. ಆದರೂ ಕೆಲವು ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಶೇ 100ರಷ್ಟು ಅಂಕ ಗಳಿಸುತ್ತಿರುವುದು ಶ್ಲಾಘನೀಯ. ಇಂತಹವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.

ADVERTISEMENT

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮುಂದೇನು ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಕನ್ನಡದಲ್ಲೇ ಉನ್ನತ ಶಿಕ್ಷಣ ನೀಡುವಂತೆ ಆಗಬೇಕು. ಆಗ ಮಾತ್ರ ಕನ್ನಡ ಉಳಿವು ಸಾಧ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾ, ಮಕ್ಕಳನ್ನು ಪ್ರೋತ್ಸಾಹಿಸುವುದು ಮತ್ತು ಪ್ರತಿಭಾ ಪುರಸ್ಕಾರ ನೀಡುವುದು, ಕನ್ನಡ ಕಟ್ಟಿ ಬೆಳೆಸುವುದು ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ ಎಂದರು.

ಕನ್ನಡ ಅಸ್ಮಿತೆ ಉಳಿಯಬೇಕು. ತಲೆಮಾರುಗಳ ಹಿಂದೆ ವಿದೇಶಕ್ಕೆ ಹೋಗಿರುವವರನ್ನು ಇಂದೂ ಕೂಡ ಕನ್ನಡರಿಗರೆಂದೇ ಗುರುತಿಸಲಾಗುತ್ತದೆ. ಹಾಗಾಗಿ ಕನ್ನಡದ ಅಸ್ಮಿತೆಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಾಹಿತಿ ಶೈಲಾ ನಾಗರಾಜ್, ವಕೀಲ ಎ.ಬಿ.ಕುಮಾರಸ್ವಾಮಿ, ಮಹಾನಗರ ಪಾಲಿಕೆ ಸದಸ್ಯರಾದ ಟಿ.ಎಂ.ಮಹೇಶ್‌ಕುಮಾರ್, ಗಿರಿಜಾ ಧನಿಯಾಕುಮಾರ್, ಗೌರವ ಕಾರ್ಯದರ್ಶಿ ಎಚ್.ಗೋವಿಂದಯ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ರವಿಕುಮಾರ್ ಹಾಗೂ ಕೋಶಾಧ್ಯಕ್ಷ ಬಿ.ಮರುಳಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.