ADVERTISEMENT

ತುಮಕೂರು | ‘ಕುಡುಕರ ಸಂಘ’ ಸಿನಿಮಾ ಸೆಟ್ಟೇರಲಿದೆ: ರಮಾನಂದ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 7:15 IST
Last Updated 2 ಜನವರಿ 2024, 7:15 IST
ತುಮಕೂರಿನಲ್ಲಿ ಸೋಮವಾರ ‘ಅಖಿಲ ಕರ್ನಾಟಕ ಕುಡುಕರ ಸಂಘ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಹಾಸ್ಯ ಕಲಾವಿದ ಮೈಸೂರು ರಮಾನಂದ, ನಿರ್ದೇಶಕ ಆನಂದ ಕಲ್ಪತರು, ನಿರ್ಮಾಪಕ ವಿಷ್ಣುವರ್ಧನ, ನಟ ಟೈಗರ್ ನಾಗ್ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಸೋಮವಾರ ‘ಅಖಿಲ ಕರ್ನಾಟಕ ಕುಡುಕರ ಸಂಘ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಹಾಸ್ಯ ಕಲಾವಿದ ಮೈಸೂರು ರಮಾನಂದ, ನಿರ್ದೇಶಕ ಆನಂದ ಕಲ್ಪತರು, ನಿರ್ಮಾಪಕ ವಿಷ್ಣುವರ್ಧನ, ನಟ ಟೈಗರ್ ನಾಗ್ ಇತರರು ಉಪಸ್ಥಿತರಿದ್ದರು   

ತುಮಕೂರು: ಹಾಸ್ಯ ಹಾಗೂ ಗಂಭೀರ ಸಂದೇಶವನ್ನು ನೀಡುವ ‘ಅಖಿಲ ಕರ್ನಾಟಕ ಕುಡುಕರ ಸಂಘ’ ಎಂಬ ಸಿನಿಮಾದ ಚಿತ್ರೀಕರಣ ಶೀಘ್ರವೇ ಆರಂಭವಾಗಲಿದೆ ಎಂದು ಹಾಸ್ಯ ಕಲಾವಿದ ಮೈಸೂರು ರಮಾನಂದ ಹೇಳಿದರು.

ನಗರದ ಕಲ್ಪತರು ಅಭಿನಯ ತರಬೇತಿ ಸಂಸ್ಥೆ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಸೋಮವಾರ ಮಾತನಾಡಿದರು.

ಬೆಳ್ಳಿ ಬಟ್ಲು ಫಿಲಂ, ಕಲ್ಪತರು ಕ್ರಿಯೇಷನ್ಸ್ ಲಾಂಛನದಲ್ಲಿ ‘ಕುಡುಕರ ಸಂಘ’ ಸಿನಿಮಾ ಮೂಡಿಬರಲಿದೆ. ಕುಡುಕರ ಕಷ್ಟ, ನಷ್ಟ, ನೋವು, ನಲಿವುಗಳ ಜತೆಗೆ, ಮದ್ಯ ಮಾರಾಟವನ್ನೇ ಆದಾಯದ ಮೂಲ ಮಾಡಿಕೊಂಡಿರುವ ಸರ್ಕಾರದ ನಡೆ, ಅದರಿಂದ ಆಗುತ್ತಿರುವ ಅನಾಹುತಗಳ ಕುರಿತಂತೆ ಸಿನಿಮಾದ ಕಥೆ ಸಾಗಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಕುಡುಕರ ಸಂಘ’ ಚಿತ್ರ ನಿರ್ದೇಶಕ ಆನಂದ ಕಲ್ಪತರು, ‘ಕೋವಿಡ್ ಸಂದರ್ಭದಲ್ಲಿ ಚಿತ್ರಕಥೆ ಸಿದ್ದಗೊಂಡಿದೆ. ನಗರದ ವಿಷ್ಣುವರ್ಧನ್ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದು, ಶೇ 70ರಷ್ಟು ಚಿತ್ರೀಕರಣ ತುಮಕೂರು ಸುತ್ತಮುತ್ತ ನಡೆಯಲಿದೆ. ಸ್ಥಳೀಯ ಕಲಾವಿದರಿಗೆ ಅದ್ಯತೆ ನೀಡಲಾಗಿದೆ’ ಎಂದು ತಿಳಿಸಿದರು.

ಸಿನಿಮಾ ನಿರ್ಮಾಪಕ ವಿಷ್ಣುವರ್ಧನ, ‘ಕಳೆದ ಮೂರು ವರ್ಷಗಳಿಂದ ಸಿನಿಮಾ ನಿರ್ಮಾಣ ತಯಾರಿ ನಡೆದಿದೆ. ಮುಂದಿನ ಫೆಬ್ರುವರಿಯಲ್ಲಿ ಶೂಟಿಂಗ್ ಆರಂಭವಾಗಲಿದೆ’ ಎಂದರು.

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ನಟ ಟೈಗರ್ ನಾಗ್, ಕನ್ನಡ ಪ್ರಕಾಶ್, ನಟ ಅರ್ಜುನ್ ಪಾಳ್ಳೇಗಾರ್, ಕಲಾವಿದರಾದ ಸಂಗೀತ ಶ್ರೀನಿವಾಸ್, ಗುರುಪ್ರಸಾದ್, ಸಂಜು, ಚಕ್ರವರ್ತಿ ಪ್ರಕಾಶ್, ಮೀಸೆ ಸತೀಶ್, ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.