ADVERTISEMENT

ಸರ್ವಜ್ಞರ ಪರಿಚಯಿಸಿದ ಚನ್ನಪ್ಪ ಸದಾ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 11:37 IST
Last Updated 30 ಅಕ್ಟೋಬರ್ 2019, 11:37 IST
ಕಾರ್ಯಕ್ರಮದಲ್ಲಿ ಪ್ರೊ.ಅಜಿತ್ ಕುಮಾರ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಪ್ರೊ.ಅಜಿತ್ ಕುಮಾರ್ ಮಾತನಾಡಿದರು   

ತುಮಕೂರು: ಸರ್ವಜ್ಞನನ್ನು ಕನ್ನಡಿಗರಿಗೆ ಪರಿಚಯಿಸಿದ ರೆವರೆಂಡ್ ಉತ್ತಂಗಿ ಚನ್ನಪ್ಪ ಅವರು ಸದಾ ಸ್ಮರಣೀಯರು ಎಂದು ತುಮಕೂರು ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಅಜಿತ್ ಕುಮಾರ್ ನುಡಿದರು.

ಜಿಲ್ಲಾ ಗ್ರಂಥಾಲಯ, ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಮತ್ತು ಟ್ಯಾಕಲ್ ಸಂಸ್ಥೆ ಸಹಯೋಗದಲ್ಲಿ ನಡೆದ ರೆವರೆಂಡ್ ಉತ್ತಂಗಿ ಚನ್ನಪ್ಪ ಅವರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ತತ್ವಜ್ಞಾನ ಎನ್ನುವುದು ಬುದ್ಧಿಯ ಚಮತ್ಕಾರವಲ್ಲ. ಎಲ್ಲ ಧರ್ಮಗಳಲ್ಲಿನ ಉತ್ತಮ ಅಂಶಗಳನ್ನು ಆಯ್ಕೆ ಮಾಡಿಕೊಂಡು, ಜನಜೀವನದ ಸಾಮರಸ್ಯ-ಸಹಬಾಳ್ವೆಗೆ ಒತ್ತು ನೀಡಿದ ವ್ಯಕ್ತಿತ್ವ ಉತ್ತಂಗಿಯವರದ್ದು. ವಿದೇಶಿ ಮಿಷನರಿಗಳಲ್ಲಿದ್ದ ತಾರತಮ್ಯ ವಿರೋಧಿಸುತ್ತಿದ್ದರು. ಅನಾಥ ಮಕ್ಕಳನ್ನು ಮಾತೃ ಹೃದಯದಿಂದ ಕಾಣುತ್ತಿದ್ದರು. ಮಕ್ಕಳ ಓದಿಗೆ ಆದ್ಯತೆ ನೀಡಿ ಮಾನವೀಯ ನೆಲೆಯ ಜಾತ್ಯತೀತರಾಗಿದ್ದರು ಎಂದು ಬಣ್ಣಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಟ್ಯಾಕಲ್ ಸಂಸ್ಥೆ ಕಾರ್ಯದರ್ಶಿ ಎಸ್.ಕುಮಾರಸ್ವಾಮಿ, ‘ಉತ್ತಂಗಿ ಚನ್ನಪ್ಪನವರು ಸರಳ, ಸಜ್ಜನಿಕೆಯ ಸಾಹಿತಿ ಆಗಿದ್ದರು. ಅವರು ಮೌಲಿಕ ಗ್ರಂಥಗಳನ್ನು ನೀಡಿ ಅಮರರಾಗಿದ್ದಾರೆ. ಅವರ ಕೃತಿಗಳೇ ನಮ್ಮ ಬದುಕಿಗೆ ದಾರಿದೀಪ. ಅವರ ಒಂದೊಂದು ನುಡಿಗಳು ಯುವ ಸಾಹಿತಿಗಳಿಗೆ ಪ್ರೇರಕ ಎಂದು ಪ್ರಶಂಸಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಚನ್ನಪ್ಪನವರು ನಾನು ಕವಿಯಲ್ಲ, ಕವನಗಾರನಲ್ಲ, ಕತೆಗಾರನಲ್ಲ, ಆದರೂ ನಾನೊಂದು ಹಾಡು ಹಾಡುವೆ. ಪ್ರಾಸವಿಲ್ಲದ ಹಾಡು, ಮಾನವ ಹಾಡು ಎಂದು ಮಾನವ ಬದುಕಿನ ಶ್ರೇಷ್ಠತೆಯನ್ನು ಸಾರಿದ ಸಾಧಕ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕ ಗೋವಿಂದರಾಯ, ರಾಜಶೇಖರ್, ಇಂದಿರಮ್ಮ, ಶಿಕ್ಷಕರಾದ ರಾಜೇಶ್ವರಿ ಬಸಪ್ಪ, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.