
ತುಮಕೂರು: ಕನ್ನಡ ಭಾಷೆ ಉಳಿವು– ಅಳಿವಿನ ಬಗ್ಗೆ ಮಕ್ಕಳು ಧ್ವನಿ ಎತ್ತುವ ಮೂಲಕ ಪ್ರಜ್ಞಾವಂತಿಕೆ ಮೆರೆದರು. ಕವಿತೆ, ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಭಾಷಾಭಿಮಾನ ತೋರಿದರು. ಜಿಲ್ಲೆಯ ವಿವಿಧ ಭಾಗಗಳ ಮಕ್ಕಳು ತಮ್ಮ ಗ್ರಹಿಕೆಯ ಕನ್ನಡವನ್ನು ಪ್ರಸ್ತುತ ಪಡಿಸಿದರು.
ನಗರದ ಗಾಜಿನ ಮನೆಯಲ್ಲಿ ನಡೆಯುತ್ತಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಮಂಗಳವಾರ ಆಯೋಜಿಸಿದ್ದ ಮಕ್ಕಳ ಗೋಷ್ಠಿ ಎಲ್ಲರ ಗಮನವನ್ನು ಕೇಂದ್ರೀಕರಿಸಿತ್ತು. ಭಾಷೆಯ ಇತಿಹಾಸ, ನಡೆದು ಬಂದ ಹಾದಿ, ಎದುರಿಸಿದ ಸವಾಲು ಹಾಗೂ ಪ್ರಸ್ತುತದ ಸ್ಥಿತಿಗತಿಯನ್ನು ಮಕ್ಕಳು ತೆರೆದಿಟ್ಟರು. ಕನ್ನಡ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಕೊಟ್ಟರು.
ಮೊಬೈಲ್, ಸಾಮಾಜಿಕ ಜಾಲ ತಾಣದ ಅತಿಯಾದ ಬಳಕೆ ಬಗ್ಗೆ ಎಚ್ಚರಿಸಿದರು. ‘ಮಕ್ಕಳಿಗೆ ಮೊಬೈಲ್ ಕೊಡಿ, ಬಳಕೆಯ ಮಾರ್ಗದರ್ಶನ ಮಾಡಿ’ ಎಂದು ಪೋಷಕರಿಗೆ ತಿಳಿ ಹೇಳಿದರು. ಅವಿಭಕ್ತ ಕುಟುಂಬಗಳು ಚೂರಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಹಿರಿಯರ ಮಹತ್ವ ಸಾರಿದರು.
ತಿಪಟೂರಿನ ಕಲ್ಪತರು ಸೆಂಟ್ರಲ್ ಶಾಲೆ ವಿದ್ಯಾರ್ಥಿನಿ ಎಂ.ಕಾವೇರಿ, ‘ಕನ್ನಡ ಉಳಿಸುವಲ್ಲಿ ಕನ್ನಡಿಗರ ಪಾತ್ರ’ ಕುರಿತು ಮಾತನಾಡಿದರು. ‘ರಾಜ್ಯದಲ್ಲಿ ಪರಭಾಷಿಕರು ಅತಿಥಿಗಳಷ್ಟೇ, ಯಜಮಾನರಲ್ಲ! ಅನ್ಯಭಾಷೆ ಬಳಕೆಗೆ ನಿಯಂತ್ರಣ ಹೇರಬೇಕು’ ಎಂದು ಒತ್ತಾಯಿಸಿದರು.
ಕನ್ನಡ ಅಳಿವಿನಂಚಿಗೆ ಸಾಗುತ್ತಿದೆ. ಗಡಿಭಾಗದಲ್ಲಿ ನಿಂತು ಭಾಷೆಯ ಬಗ್ಗೆ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಣ್ಣಿನಲ್ಲಿ ಬದುಕು ಕಟ್ಟಿಕೊಂಡವರು ಭಾಷೆ ಉಳಿವಿಗೆ ಶ್ರಮಿಸಬೇಕು. ಕನ್ನಡದ ನೆಲದಲ್ಲಿಯೇ ಕನ್ನಡ ಉಳಿಸದಿದ್ದರೆ ಹೇಗೆ? ಎಂಬ ಪ್ರಶ್ನೆ ಎತ್ತಿದರು.
ಪರಭಾಷೆ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಆಗುವುದಿಲ್ಲ. ಅದಕ್ಕೆ ನಿಯಂತ್ರಣ ಹೇರಲು ಸಾಧ್ಯ. ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಬಳಸಬೇಕು. ಸಾಮಾಜಿಕ ಜಾಲ ತಾಣದಲ್ಲಿ ಕನ್ನಡದ ಬಗ್ಗೆ ಬರೆಯಬೇಕು. ರೀಲ್ಸ್‌ಗಳಲ್ಲಿಯೂ ಭಾಷೆ ಕುರಿತು ಪ್ರಸ್ತಾಪಿಸಬೇಕು ಎಂದು ಸಲಹೆ ಮಾಡಿದರು.
ಕಲ್ಪತರು ಸೆಂಟ್ರಲ್ ಶಾಲೆ ವಿದ್ಯಾರ್ಥಿನಿ ಬೆಳಕು ನವೀನ್, ‘ಪುಸ್ತಕದ ಪಾಠಕ್ಕಿಂತ ಅನುಭವದ ಪಾಠಗಳು ಹೆಚ್ಚಿರುತ್ತವೆ. ಏನನ್ನೂ ಓದದ, ಎಲ್ಲರೂ ಓದಬೇಕಾದ ಪುಸ್ತಕ ಅಜ್ಜಿ. ಅಜ್ಜ, ಅಜ್ಜಿ ಭೂತಕಾಲದ ಕನ್ನಡಿಯಷ್ಟೆ ಅಲ್ಲ, ಭವಿಷ್ಯದ ಬಾಗಿಲು ಕೂಡ’ ಎಂದರು.
ಸಾಹಿತ್ಯ ಸಮ್ಮೇಳನಾಧ್ಯಕ್ಷ ಕರೀಗೌಡ ಬೀಚನಹಳ್ಳಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಜಿ.ರಘುಚಂದ್ರ, ಮಾಧವರೆಡ್ಡಿ, ಡಯಟ್ ಉಪನಿರ್ದೇಶಕ ಎಸ್.ಸಿ.ಮಂಜುನಾಥ್, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ಹೊಳವನಹಳ್ಳಿ ಕೆಪಿಎಸ್ ಶಾಲೆಯ ತನುಜಾ, ರಾಜವಂತಿ ಸರ್ಕಾರಿ ಶಾಲೆಯ ತನುಜಾ, ಬ್ಯಾಲ್ಯದ ಮೊಹ್ಮದ್ ಅಯಾನ್, ಚೊಟ್ಟನಹಳ್ಳಿ ಸರ್ಕಾರಿ ಪ್ರೌಢಶಾಲೆಯ ನಮ್ರತಾ, ತುರುವೇಕೆರೆಯ ಮಾನ್ಯತಾ, ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಿ.ಪಿ.ರಚನಾ, ಶಿರಾದ ವಿ.ಪಲ್ಲವಿ, ದೊಡ್ಡವೀರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಭಾಗ್ಯಾ, ಹೇರೂರು ಶಾಲೆಯ ಎಚ್.ಪೂಜಾಶ್ರೀ ಇತರರು ಭಾಗವಹಿಸಿದ್ದರು.
ಬುದ್ಧಿವಾದದ ದಾರಿಯಲ್ಲಿ ಸಾಗಿ ‘ಮೊಬೈಲ್ ಸಾಧನವಲ್ಲ ಬದುಕಿನ ಭಾಗವಾಗಿದೆ. ಮಕ್ಕಳು ಭಾವನೆಗಳಲ್ಲ. ಬುದ್ಧಿವಾದದ ದಾರಿಯಲ್ಲಿ ಸಾಗಬೇಕು. ಮೊಬೈಲ್‌ನ ಸಂಪೂರ್ಣ ನಿಯಂತ್ರಣ ಸಾಧ್ಯವಿಲ್ಲ. ಸರಿಯಾದ ಮಾರ್ಗದಲ್ಲಿ ಬಳಸಿದರೆ ಉತ್ತಮ’ ಎಂದು ನೊಣವಿನಕೆರೆ ಕೆಪಿಎಸ್ ಶಾಲೆ ವಿದ್ಯಾರ್ಥಿನಿ ವಿ.ಎನ್.ಹೇಮಾ ಅಭಿಪ್ರಾಯಪಟ್ಟರು. ‘ಮಕ್ಕಳಿಗೆ ಮೊಬೈಲ್ ಬೇಕೆ?’ ಎಂಬುವುದರ ಕುರಿತು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕೌಶಲ ಕಲಿಕೆ ಹೊಸ ವಿಷಯ ತಿಳಿಯಲು ಮೊಬೈಲ್ ಅಗತ್ಯ. ಇದರಲ್ಲಿ ಅಪಾಯದ ಗಂಟೆಯೂ ಇದೆ. ದಿನ ಪೂರ್ತಿ ಪರದೆಗೆ ಅಂಟಿಕೊಂಡರೆ ಅನಾರೋಗ್ಯ ಕಾಡುತ್ತದೆ. ಮಕ್ಕಳ ಮೊಬೈಲ್ ಸಂಸ್ಕೃತಿಗೆ ಪೋಷಕರೇ ಕಾರಣ. ಮಕ್ಕಳನ್ನು ನಿಯಂತ್ರಿಸಲು ಮೊಬೈಲ್ ಸುಲಭ ಮಾರ್ಗ. ಆದರೆ ಇದು ಅವರ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
‘ಮೇಲು– ಕೀಳೆಂಬ ವಿಷ ವ್ಯೂಹ’ ಚೇಳೂರು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸಹನಾ ಪ್ರಸ್ತುತ ಪಡಿಸಿದ ‘ನಾನು ಭಾರತಾಂಬೆ’ ಶೀರ್ಷಿಕೆಯ ಕವಿತೆ ನೆರೆದವರನ್ನು ಎಚ್ಚರಿಸಿತು. ‘ಪ್ರೀತಿಯ ಕೊಳವಾಗಿದ್ದ ನನ್ನನ್ನು ದ್ವೇಷದ ಮಡುವಾಗಿಸಿದ್ದಾರೆ. ಒಂದಾಗಿದ್ದ ಎಲ್ಲರು ಭಾಷೆ ಜಾತಿ ಹೆಸರಿನಲ್ಲಿ ಬಡಿದಾಡುತ್ತಿದ್ದಾರೆ. ಬಡವ– ಬಲ್ಲಿದ ಮೇಲು– ಕೀಳೆಂಬ ವಿಷ ವ್ಯೂಹದಲ್ಲಿ ಸಿಲುಕಿದ್ದಾರೆ. ಹಸಿವು ಬಡತನ ನಿರುದ್ಯೋಗ ಶೋಷಣೆಗಳು ಎಲ್ಲೆಡೆ ನರ್ತಿಸುತ್ತಿವೆ. ದುರ್ಬಲರ ಅಸಹಾಯಕರ ಅನಾಥರ ಆರ್ತನಾದ ಕೇಳುತ್ತಿದೆ’ ಎಂಬ ಸಾಲುಗಳು ದೇಶದ ಸದ್ಯದ ಸ್ಥಿತಿಗೆ ಕನ್ನಡಿ ಹಿಡಿದವು. ‘ಓ ನನ್ನ ಕರುಳು ಕುಡಿಗಳೇ ನನ್ನ ಮನ ಕದಡದಿರಿ. ಎಲ್ಲರ ಮುಂದೆ ನನ್ನನ್ನು ಬೆತ್ತಲಾಗಿಸಿದಿರಿ ಇನ್ನಾದರೂ ಎಚ್ಚೆತ್ತುಕೊಳ್ಳಿ. ಮಾನವರನ್ನು ಮಾನವರಾಗಿ ನೋಡುವ ಮಾನವೀಯತೆ ಬೆಳೆಸಿಕೊಳ್ಳಿ. ಜಾತಿ ಸಂಕೋಲೆಯಿಂದ ಹೊರ ಬಂದು ನಾವೆಲ್ಲ ಭಾರತಿಯರು ಎಂದು ಎದೆ ತಟ್ಟಿ ಹೇಳಿ. ಇದೇ ನನ್ನ ಕರುಳ ಕೊರಳ ಕೂಗು ಹೃದಯದ ಆರ್ತನಾದ’ ಎಂದು ಹೇಳುತ್ತಾ ನಿಮ್ಮ ಅಂಕುಡೊಂಕುಗಳ ತಿದ್ದಿ ನಡೆಯಿರಿ ಎಂದು ಎಚ್ಚರಿಸಿದರು.