ADVERTISEMENT

ಕಾರೇಹಳ್ಳಿ: ದನಗಳ ಪರಿಷೆ ಜೋರು

ಚರ್ಮಗಂಟು ರೋಗ ಲೆಕ್ಕಿಸದೆ ಜಾತ್ರೆಗೆ ರಾಸು ಕರೆತಂದ ರೈತರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 10:03 IST
Last Updated 7 ಮಾರ್ಚ್ 2023, 10:03 IST
ಹುಳಿಯಾರು ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ಜಾತ್ರೆಯಲ್ಲಿ ಕಂಡುಬಂದ ದೇಸಿ ರಾಸುಗಳು
ಹುಳಿಯಾರು ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ಜಾತ್ರೆಯಲ್ಲಿ ಕಂಡುಬಂದ ದೇಸಿ ರಾಸುಗಳು   

ಹುಳಿಯಾರು: ಹೋಬಳಿಯ ಇತಿಹಾಸ ಪ್ರಸಿದ್ಧ ಕಾರೇಹಳ್ಳಿ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದನಗಳ ಜಾತ್ರೆಯು ಚರ್ಮಗಂಟು ರೋಗ ಭಯದ ನಡುವೆಯೂ ಆರಂಭಗೊಂಡಿದೆ.

ಕಾರೇಹಳ್ಳಿ ರಂಗನಾಥಸ್ವಾಮಿ ದನಗಳ ಜಾತ್ರೆ ಶಿವರಾತ್ರಿ ಹಬ್ಬದ ತರುವಾಯ ಆರಂಭವಾಗಿ ಯುಗಾದಿಗೆ ಮೊದಲು ಮುಗಿಯುತ್ತದೆ. ಸಾಮಾನ್ಯವಾಗಿ ಯುಗಾದಿಯ ಹೊಸ ವರ್ಷದ ನಂತರ ಪೂರ್ವ ಮುಂಗಾರಿನ ಅಶ್ವಿನಿ ಮಳೆ ಆರಂಭವಾಗುತ್ತದೆ.

ಪ್ರತಿವರ್ಷ ಪೂರ್ವ ಮುಂಗಾರು ಆರಂಭಕ್ಕೆ ಮುನ್ನ ಹಿಂಗಾರಿನ ಕೊನೆ ಮಳೆಗಳಾದ ಪೂರ್ವ ಭಾದ್ರಪದ ಹಾಗೂ ರೇವತಿ ಮಳೆ ಸಿಂಚನವಾಗುವ ಪರಿಪಾಠವಿದೆ. ಮಳೆ ಬಂದರೆ ಪೂರ್ವ ಮುಂಗಾರು ಬಿತ್ತನೆಗೆ ಭೂಮಿ ಅಣಿಗೊಳಿಸಲು ಜಾತ್ರೆಯಿಂದ ರಾಸುಗಳನ್ನು ಖರೀದಿಸಲು ಸಹಾಯವಾಗುತ್ತದೆ ಎಂಬ ಭಾವನೆ ರೈತರಲ್ಲಿದೆ.

ADVERTISEMENT

ಹತ್ತು ದಿವಸಗಳ ಕಾಲ ನಡೆಯುವ ಜಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ರೈತರು, ದಲ್ಲಾಳಿಗಳು ರಾಸುಗಳನ್ನು ಕೊಳ್ಳಲು ಬರುತ್ತಾರೆ. ಹೆಚ್ಚಾಗಿ ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಗದಗ, ಆಂಧ್ರದ ಅನಂತಪುರ ಜಿಲ್ಲೆಯಿಂದ ಖರೀದಿದಾರರು ಜಾತ್ರೆಗೆ ಬರುತ್ತಾರೆ.

ಜಿಲ್ಲೆಯಲ್ಲಿ ಚರ್ಮಗಂಟು ರೋಗ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ದನಗಳ ಜಾತ್ರೆ ನಡೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ. ಆದರೂ, ರೈತರು ಜಿಲ್ಲಾಡಳಿತದ ಆದೇಶವನ್ನು ಬದಿಗಿರಿಸಿ ಜಾತ್ರೆಯಲ್ಲಿ ರಾಸುಗಳ ವ್ಯಾಪಾರಕ್ಕೆ ಮುಂದಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಇದು ಕೂಡ ರೈತರು ರಾಸು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಆಧುನಿಕತೆ ಸೋಗಿನಲ್ಲಿ ಕೃಷಿ ತ್ಯಜಿಸಿ ರಾಸುಗಳನ್ನು ಕಳೆದುಕೊಂಡಿದ್ದ ಕೆಲವರು ಇತ್ತೀಚೆಗೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮಲ್ಲಿದ್ದ ದೇಸಿ ತಳಿಗಳನ್ನು ಮಾರಾಟ ಮಾಡಿ ಕೇವಲ ಹೈನುಗಾರಿಕೆಗೆ ಮಾತ್ರವೇ ಬಳಕೆಯಾಗುವ ಮಿಶ್ರತಳಿ ಹಸುಗಳನ್ನು ಸಾಕಾಗುತ್ತಿದ್ದಾರೆ. ಇದರ ನಡುವೆಯೇ ಜಾತ್ರೆಯಲ್ಲಿ ಸಾವಿರಾರು ದೇಸಿ ರಾಸುಗಳು ಸೇರಿವೆ.

ಬೇಸಾಯಕ್ಕೆ ಬಳಸುವ ರಾಸುಗಳ ಬೆಲೆ ₹ 60 ಸಾವಿರಕ್ಕಿಂತ ಕಡಿಮೆಯಿಲ್ಲ ಎಂದು ರೈತರೊಬ್ಬರು ಹೇಳಿದರು.

ಮುಂದಿನ ವರ್ಷದ ಕೃಷಿ ಚಟುವಟಿಕೆಗೆ ಪೂರಕವಾಗಿರುವ ಒಂದು ಜೋಡಿ ರಾಸುಗೆ ₹ 80 ಸಾವಿರದಿಂದ ₹ 1.5 ಲಕ್ಷದವರೆಗೆ ಬೆಲೆಯಿದೆ. ಈ ಬಾರಿ ದನಗಳ ಜಾತ್ರೆ ನಡೆಯುವ ಬಗ್ಗೆ ಹೆಚ್ಚು ಪ್ರಚಾರವೂ ಆಗಿಲ್ಲ. ಆದರೆ ರಾಸುಗಳು ಮಾತ್ರ ಹೆಚ್ಚಾಗಿ ಸೇರಿದ್ದು ವ್ಯಾಪಾರ ಜೋರಾಗಿ ನಡೆಯುತ್ತಿದೆ.

‘ಮೊದಲು ರೈತರು ಜಾತ್ರೆ ಇನ್ನು ಎಂಟು ದಿವಸ ಇರುವಾಗಲೇ ಹೊರಡುವ ತಯಾರಿ ನಡೆಸುತ್ತಿದ್ದರು. ಎತ್ತಿನಗಾಡಿ ಸಿದ್ಧಪಡಿಸಿ ರಾಸುಗಳಿಗೆ ಮೇವು, ರಾಸುಗಳ ಜತೆ ಬರುವವರಿಗೆ ಆಹಾರ ಸಿದ್ಧಪಡಿಸಿಕೊಳ್ಳಲು ಪರಿಕರಗಳನ್ನು ಹೊತ್ತು ಬರುತ್ತಿದ್ದರು. ದೂರದ ಊರುಗಳಿಂದ ಬರುವುದಾದರೆ ಎತ್ತಿನಗಾಡಿ ಏರಿ ಜಾತ್ರೆಗೆ ನಾಲ್ಕು ದಿನ ಮುಂಚೆಯೇ ಗ್ರಾಮ ಬಿಡುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಒಂದೇ ದಿನದಲ್ಲಿ ವಾಹನಗಳಲ್ಲಿ ರಾಸುಗಳನ್ನು ತುಂಬಿಕೊಂಡು ಬರುತ್ತಾರೆ’ ಎಂದು ಅರ್ಚಕ ಎಂ.ಆರ್. ರಾಮಸ್ವಾಮಿ‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.