ADVERTISEMENT

ದಾರಿ ತಪ್ಪಿ ಕಾಂಗ್ರೆಸ್‌ ಸೇರಿದ್ದೆ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 15:27 IST
Last Updated 9 ಏಪ್ರಿಲ್ 2023, 15:27 IST
ತುಮಕೂರು ತಾಲ್ಲೂಕಿನ ಗೂಳೂರು ಬಳಿ ಬಿಜೆಪಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಛಲವಾದಿ ಸಮಾವೇಶದಲ್ಲಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖಂಡ ಸುರೇಶ್‌ಗೌಡ ಇದ್ದರು
ತುಮಕೂರು ತಾಲ್ಲೂಕಿನ ಗೂಳೂರು ಬಳಿ ಬಿಜೆಪಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಛಲವಾದಿ ಸಮಾವೇಶದಲ್ಲಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖಂಡ ಸುರೇಶ್‌ಗೌಡ ಇದ್ದರು   

ತುಮಕೂರು: ‘ಕಾಂಗ್ರೆಸ್‌ ಜೈಲಿದ್ದಂತೆ, ನಾನು 40 ವರ್ಷ ಜೈಲಿನಲ್ಲಿ ಇದ್ದಂತೆ ಇದ್ದೆ. ದಾರಿ ತಪ್ಪಿ ಹೋಗಿ ಕಾಂಗ್ರೆಸ್‌ ಸೇರಿದ್ದೆ, ಅದು ಸುಡುವ ಮನೆ ಅಂತ ನಂತರ ಗೊತ್ತಾಯಿತು’ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ತಾಲ್ಲೂಕಿನ ಗೂಳೂರು ಬಳಿ ಭಾನುವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಛಲವಾದಿ ಸಮಾವೇಶ ಉದ್ಘಾಟಿಸಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕಾಂಗ್ರೆಸ್‌ ದಲಿತರನ್ನು ವೋಟ್‌ ಬ್ಯಾಂಕ್ ಮಾಡಿಕೊಂಡಿದೆ. ಮೂಗಿಗೆ ತುಪ್ಪ ಸವರುವುದು ಬಿಟ್ಟರೇ ಬೇರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್‌ ದಲಿತರಿಗೆ ಅಧಿಕಾರ ನೀಡುತ್ತದೆಯೇ? ಎಂದು ಪ್ರಶ್ನಿಸಿದರು.

ADVERTISEMENT

ಅಂಬೇಡ್ಕರ್ ಅವರು ತೊಂದರೆ, ನೋವು ಅನುಭವಿಸಿ ಸಂವಿಧಾನ ರಚಿಸಿದರು. ಇದನ್ನು ಸಹಿಸದ ಕಾಂಗ್ರೆಸ್ ಅಂಬೇಡ್ಕರ್‌ಗೆ ಅಧಿಕಾರ ನೀಡಿದರೆ ತಮ್ಮ ಪಕ್ಷ ನಾಶವಾಗಲಿದೆ ಎಂದು ಅರಿತು ಅವರನ್ನು ಎರಡು ಬಾರಿ ಸೋಲಿಸಿದರು. ಕಾಂಗ್ರೆಸ್ ಪರಿಶಿಷ್ಟ ಜಾತಿಯ ಮೀಸಲಾತಿ ಪಟ್ಟಿಗೆ ಅನೇಕ ಜಾತಿಗಳನ್ನು ಸೇರಿಸಿತ್ತು. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ. ಬಿಜೆಪಿ ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿದೆ ಎಂದು ತಿಳಿಸಿದರು.

ಜೆಡಿಎಸ್‌ನವರು ದಲಿತರನ್ನು ಹತ್ತಿರಕ್ಕೆ ಬಿಟ್ಟು ಕೊಳ್ಳುವುದಿಲ್ಲ. ಚುನಾವಣೆಯ ಸಮಯದಲ್ಲಿ ₹100, ₹200 ಕೊಟ್ಟರೆ ಮತ ಹಾಕುತ್ತಾರೆ ಎಂದು ಭಾವಿಸಿದ್ದಾರೆ. ಛಲವಾದಿಗಳು ಪ್ರೀತಿ, ವಿಶ್ವಾಸಕ್ಕೆ ಸೋಲುತ್ತಾರೆ ಹೊರತು, ಹಣಕ್ಕೆ ಅಲ್ಲ ಎನ್ನುವುದನ್ನು ಈ ಬಾರಿ ತೋರಿಸಬೇಕು ಎಂದರು.

ಮುಖಂಡ ಸುರೇಶ್‌ಗೌಡ, ‘ಶಾಸಕನಾಗಿ ಕೆಲಸ ಮಾಡಿದ ಅವಧಿಯಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯಕ್ಕೆ ಸಮಾನವಾಗಿ ಅಧಿಕಾರ ಹಂಚಲಾಗಿತ್ತು. ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು’ ಎಂದು ಹೇಳಿದರು.

ಮುಂದಿನ ಸಲ ಶಾಸಕನಾಗಿ ಆಯ್ಕೆಯಾದರೆ ಛಲವಾದಿ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಒಂದೇ ವರ್ಷದಲ್ಲಿ ಎರಡು ಎಕರೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ಕೊಡಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಗಂಗಾಜಿನೇಯ, ಗಿರೀಶ್, ರತ್ನಮ್ಮ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.