ADVERTISEMENT

ತುಮಕೂರು ಗ್ರಾಮಾಂತರ ಕ್ಷೇತ್ರ ಸ್ಥಿತಿ-ಗತಿ: JDS–BJP ನಾಗಾಲೋಟಕ್ಕೆ ಕೈ ತಡೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 15:57 IST
Last Updated 23 ಫೆಬ್ರುವರಿ 2023, 15:57 IST
ಡಿ.ಸಿ.ಗೌರಿಶಂಕರ್
ಡಿ.ಸಿ.ಗೌರಿಶಂಕರ್   

ತುಮಕೂರು: ರಾಜಕೀಯವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತಿದ್ದು, ಜಿದ್ದಾಜಿದ್ದಿನ ಕಣ ಸಿದ್ಧವಾಗುತ್ತಿದೆ. ವಿಧಾನಸಭೆ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಏನೆಲ್ಲ ‘ನಡೆಯಬಹುದು’ ಎಂಬ ಕುತೂಹಲ, ಆತಂಕ ಜನರಲ್ಲಿ ಈಗಾಗಲೇ ಮನೆ ಮಾಡಿದೆ.

ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳಲ್ಲಿ ಗ್ರಾಮಾಂತರ ಕ್ಷೇತ್ರವೇ ಎಲ್ಲರ ಕುತೂಹಲ ಹೆಚ್ಚಿಸಿದೆ. ಅಲ್ಲಿನ ‘ಅಬ್ಬರ’ ಕಂಡವರು ಫಲಿತಾಂಶವನ್ನು ಯಾವ ದಿಕ್ಕಿಗೆ ಕೊಂಡೊಯ್ಯಬಹುದು ಎಂಬ ಚಿಂತೆಯಲ್ಲಿ ಇದ್ದಾರೆ. ಕೊಲೆಗೆ ಸುಫಾರಿ ಆರೋಪ, ಪರಸ್ಪರ ದೂರು ಸಲ್ಲಿಕೆ, ನಿಂದನೆ ಮತ್ತಿತರ ವಿಚಾರಗಳು ಇತ್ತೀಚೆಗೆ ಗಮನ ಸೆಳೆದಿದ್ದವು. ಆ ಕಾರಣಕ್ಕೆ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ದಿನಗಳು ಕಳೆದಂತೆ ರಾಜಕೀಯ ಕಣ ರಂಗೇರುತ್ತಿದೆ.

ಜೆಡಿಎಸ್ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಅಭ್ಯರ್ಥಿ ಎಂದು ದಳಪತಿಗಳು ಘೋಷಿಸಿದ್ದಾರೆ. ಆಯ್ಕೆ ಮಾಡಿದರೆ ಸಚಿವರನ್ನಾಗಿ ಮಾಡುವ ಭರವಸೆಯನ್ನೂ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಮಾಜಿ ಶಾಸಕ ಬಿ.ಸುರೇಶ್‌ಗೌಡ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಈವರೆಗೆ ಜೆಡಿಎಸ್– ಬಿಜೆಪಿ ನಡುವಿನ ಕದನವಾಗಿದ್ದ ಕ್ಷೇತ್ರ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಜ್ಜಾಗುತ್ತಿದೆ. ಜೆಡಿಎಸ್ ತೊರೆದಿರುವ ಮಾಜಿ ಶಾಸಕ ಎಚ್.ನಿಂಗಪ್ಪ ಕಾಂಗ್ರೆಸ್ ಸೇರಿದ್ದಾರೆ. ಬಹುತೇಕ ಟಿಕೆಟ್ ಖಚಿತಪಡಿಸಿಕೊಂಡಿದ್ದು, ಪ್ರಚಾರಕ್ಕೆ ಇಳಿದಿದ್ದಾರೆ. ಇಬ್ಬರ ಹೋರಾಟಕ್ಕೆ ಮತ್ತೊಬ್ಬರು ಸೇರಿಕೊಂಡಿದ್ದಾರೆ.

ADVERTISEMENT

ಶಂಕುಸ್ಥಾಪನೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದರ ಜತೆಗೆ ಕಳೆದ ಒಂದು ವರ್ಷದಿಂದಲೇ ಗೌರಿಶಂಕರ್ ಪ್ರಚಾರ ಆರಂಭಿಸಿದ್ದಾರೆ. ದೇಗುಲಗಳಿಗೆ ಕೈ ಎತ್ತಿ ದೇಣಿಗೆ ನೀಡುತ್ತಿದ್ದಾರೆ. ಯುವಪಡೆಯನ್ನು ಕಟ್ಟಿಕೊಂಡು ಅವರನ್ನು ‘ಸಂತೃಪ್ತಿ’ಗೊಳಿಸುವ ಕೆಲಸದಲ್ಲೂ ತೊಡಗಿದ್ದಾರೆ. ಇದು ಹಿರಿಯರ ಸಿಟ್ಟಿಗೂ ಕಾರಣವಾಗಿದೆ. ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಸಿಕ್ಕ ಜನ ಬೆಂಬಲದಿಂದ ಮತ್ತಷ್ಟು ಉತ್ಸಾಹದಿಂದ ಪ್ರಚಾರ ನಡೆಸಿದ್ದಾರೆ. ಜಾತ್ರೆ, ಉತ್ಸವ, ಮದುವೆ ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನರನ್ನು ಸೆಳೆಯುತ್ತಿದ್ದಾರೆ.

ಮಾಜಿ ಶಾಸಕ ಬಿ.ಸುರೇಶ್‌ಗೌಡ ಕಳೆದ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರದಲ್ಲಿನ ಸಂಪರ್ಕ ಮುಂದುವರಿಸಿದ್ದು, ಇತ್ತೀಚೆಗೆ ಕಚೇರಿಯನ್ನೂ ತೆರೆದಿದ್ದಾರೆ. ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು, ರಸ್ತೆ, ಕುಡಿಯುವ ನೀರು, ಆರೋಗ್ಯ ಕ್ಷೇತ್ರದ ಪ್ರಗತಿ, ಮಾದರಿ ಶಾಲೆಗಳ ನಿರ್ಮಾಣ ವಿಚಾರಗಳನ್ನು ಜನರ ಮುಂದಿಡುತ್ತಿದ್ದಾರೆ. ‘ನನ್ನ ಅವಧಿಯಲ್ಲೇ ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆದಿವೆ. ಬೇಕಿದ್ದರೆ ಲೆಕ್ಕಹಾಕಿ ನೋಡಿ. ಅಭಿವೃದ್ಧಿ ಮೇಲೆ ಮತ ಕೋಡಿ’ ಎಂದು ಕೇಳುತ್ತಿದ್ದಾರೆ. ದೇಗುಲಗಳಿಗೂ ನೆರವು ನೀಡುತ್ತಲೇ ಸೋಲಿನ ಅನುಕಂಪ ನೆರವಿಗೆ ಬರಲಿದೆ ಎಂದು ಭಾವಿಸಿದ್ದಾರೆ.

ಇಬ್ಬರ ನಡುವೆ ‘ಕಾದಾಟ’ಕ್ಕೆ ಎಚ್.ನಿಂಗಪ್ಪ ಸೇರ್ಪಡೆಯಾಗಿದ್ದಾರೆ. ಕೈ ಪಡೆಗೂ ಒಂದು ರೀತಿ ಶಕ್ತಿ ಬಂದಂತಾಗಿದ್ದು, ಅವರಿಗೂ ಕೊನೆಗಾಲದಲ್ಲಿ ಆಸರೆ ಸಿಕ್ಕಂತಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲೇ ಎರಡು ಬಾರಿ ಸೋತಿದ್ದು, (ಕುಣಿಗಲ್‌ನಲ್ಲಿ ನಾಲ್ಕು ಬಾರಿ ಸೋಲು) ತಮಗೂ ಅನುಕಂಪ ಕೈ ಹಿಡಿಯಬಹುದು ಎಂದು ನಂಬಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲವಾಗಿದ್ದು, ನಿಂಗಪ್ಪ ಪ್ರವೇಶದಿಂದ ಪಕ್ಷದ ಕಾರ್ಯಕರ್ತರಲ್ಲಿ ಒಂದಷ್ಟು ಉತ್ಸಾಹ ಮೂಡಿಸಿದೆ. ‘ಇದು ನನ್ನ ಕೊನೆ ಚುನಾವಣೆ’ ಎಂದು ಹೇಳುತ್ತಿದ್ದಾರೆ. ಹೆಬ್ಬೂರು, ಗೂಳೂರು ಸುತ್ತಮುತ್ತ ಸಂಬಂಧಿಗಳ ಸಂಖ್ಯೆಯೇ ದೊಡ್ಡ ಮಟ್ಟದಲ್ಲಿದ್ದು, ಸೋಲಿನ ಅನುಕಂಪವೂ ಇದೆ. ಇಬ್ಬರ ಆರ್ಭಟದ ಮಧ್ಯೆ ಕ್ಷೇತ್ರದಲ್ಲಿ ಪ್ರಮುಖರನ್ನು ಭೇಟಿಯಾಗಿ, ಮನೆಮನೆ ಪ್ರಚಾರ ನಡೆಸಿದ್ದಾರೆ.

ಕೋರ್ಟ್‌ ತೀರ್ಪಿಗೆ ಕ್ಷಣ ಗಣನೆ

‘2018ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆಸಿ, ಬಾಂಡ್‌ಗಳನ್ನು ವಿತರಿಸಿ ಆಯ್ಕೆಯಾಗಿರುವ ಡಿ.ಸಿ.ಗೌರಿಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು’ ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೋರ್ಟ್‌ನಲ್ಲಿ ಮುಕ್ತಾಯವಾಗಿದೆ. ಇನ್ನೇನು ತೀರ್ಪು ಹೊರ ಬೀಳಲಿದ್ದು, ಎಲ್ಲರ ಚಿತ್ತ ಕೋರ್ಟ್‌ನತ್ತ ನೆಟ್ಟಿದೆ.

ಗೌರಿಶಂಕರ್ ಪರವಾಗಿ ತೀರ್ಪು ಬಂದರೆ ಸ್ಪರ್ಧೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಅನರ್ಹಗೊಂಡರೆ ಸ್ಪರ್ಧೆ ಕಷ್ಟಕರವಾಗಬಹುದು. ಆಗ ಪರ್ಯಾಯ ಮಾರ್ಗ ಹುಡುಕಬೇಕಾಗುತ್ತದೆ. ತಕ್ಷಣಕ್ಕೆ ಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದರೆ ಸ್ಪರ್ಧಿಸಲು ಅವಕಾಶ ಸಿಗಬಹುದು. ಈ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ವಾಪಸ್ ಬಂದಿರುವುದರಿಂದ ತಕ್ಷಣಕ್ಕೆ ತಡೆಯಾಜ್ಞೆ ಸಿಗುವುದು ಕಷ್ಟಕರ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.

ಎಲ್ಲವೂ ಕೋರ್ಟ್ ತೀರ್ಪು, ಸುಪ್ರೀಂ ಕೋರ್ಟ್ ನಿಲುವಿನ ಮೇಲೆ ನಿಂತಿದೆ ಎಂದು ಹೇಳಲಾಗುತ್ತಿದೆ.

ಕೊಲೆ ಆರೋಪ

ಗ್ರಾಮಾಂತರ ಕ್ಷೇತ್ರದಲ್ಲಿ ಒಂದಿಲ್ಲೊಂದು ವಿವಾದಗಳು ಚರ್ಚೆಗೆ ಗ್ರಾಸವಾಗುತ್ತಲೇ ಇವೆ. ಹಾಲಿ– ಮಾಜಿಗಳ ಪರಸ್ಪರ ದೂಷಣೆ ಮುಂದುವರೆದಿದೆ. ‘ನನ್ನ ಕೊಲೆಗೆ ಶಾಸಕ ಡಿ.ಸಿ.ಗೌರಿಶಂಕರ್ ಸುಫಾರಿ ನೀಡಿದ್ದಾರೆ’ ಎಂದು ಬಿ.ಸುರೇಶ್‌ಗೌಡ ದೂರು ದಾಖಲಿಸಿದ್ದರು. ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ‘ಸುಳ್ಳು ಆರೋಪ ಮಾಡಿರುವ ಸುರೇಶ್‌ಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗೌರಿಶಂಕರ್ ದೂರು ನೀಡಿದ್ದರು.

ಕೋವಿಡ್ ಸಮಯದಲ್ಲಿ ಗೌರಿಶಂಕರ್ ಜನರಿಗೆ ಕೊಡಿಸಿದ್ದ ಲಸಿಕೆಯೂ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಖರೀದಿಗೆ ಬಗ್ಗೆ ಅನುಮಾನ ವ್ಯಕ್ತವಾಗಿ ತನಿಖೆಯೂ ನಡೆದಿತ್ತು.

***

ಹಾಲಿ ಮತದಾರರ ವಿವರ

ಒಟ್ಟು ಮತದಾರರು– 2,02,352

ಪುರುಷರು– 1,00,374

ಮಹಿಳೆಯರು– 1,01,961

ತೃತೀಯ ಲಿಂಗಿಗಳು– 17

**

ಚುನಾವಣೆ ಮತಗಳ ವಿವರ

ಪಕ್ಷಗಳು;2018;2013;2008

ಜೆಡಿಎಸ್;82,740;53,457;32,512

ಬಿಜೆಪಿ;77,100;55,029;60,904

ಕಾಂಗ್ರೆಸ್;7,633;8,599;21,642

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.