
ಪಥ ಸಂಚಲನದಲ್ಲಿ ಭಾಗವಹಿಸಿದ ತುಮಕೂರು ತಂಡ
ತುಮಕೂರು: ನಗರದಲ್ಲಿ ಹಾಕಿ ಕ್ರೀಡಾಂಗಣ, ಈಜುಕೊಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ₹6 ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಕರ್ನಾಟಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರದಲ್ಲಿ ಹಾಕಿ ಕ್ರೀಡಾಂಗಣ, ಈಜುಕೊಳ ಹೊರತುಪಡಿಸಿ ಇತರೆ ಕ್ರೀಡಾ ಸೌಲಭ್ಯಗಳಿವೆ. ಈ ಎರಡು ಕ್ರೀಡಾಂಗಣ ನಿರ್ಮಾಣಕ್ಕೆ ₹25 ಕೋಟಿ ಅನುದಾನ ನೀಡಬೇಕು ಎಂದು ಸಚಿವ ಜಿ.ಪರಮೇಶ್ವರ ಮಾಡಿದ ಮನವಿಗೆ ಈ ಭರವಸೆ ನೀಡಿದರು.
ಕಳೆದ ಬಾರಿ ಮಂಗಳೂರು– ಉಡುಪಿಯಲ್ಲಿ ನಡೆದ ಕರ್ನಾಟಕ ಒಲಿಂಪಿಕ್ಸ್ ಸಮಯದಲ್ಲಿ ₹6 ಕೋಟಿ ನೆರವು ನೀಡಲಾಗಿತ್ತು. ಇಲ್ಲೂ ಅಷ್ಟೇ ಮೊತ್ತದ ಅನುದಾನ ನೀಡಲಾಗುವುದು. ಬೇಡಿಕೆ ಇಟ್ಟಿರುವ ₹25 ಕೋಟಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರೆ ₹6 ಕೋಟಿ, ಬೆಳ್ಳಿ ಜಯಿಸಿದರೆ ₹4 ಕೋಟಿ, ಕಂಚು ಗೆದ್ದರೆ ₹3 ಕೋಟಿಯನ್ನು ರಾಜ್ಯ ಸರ್ಕಾರದ ವತಿಯಿಂದ ಕೊಡಲಾಗುತ್ತಿದೆ. ರಾಜ್ಯ ಸರ್ಕಾರದ ಉದ್ಯೋಗ ನೇಮಕಾತಿಯಲ್ಲೂ ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ಪೊಲೀಸ್, ಅರಣ್ಯ ಇಲಾಖೆಯಲ್ಲಿ ಶೇ 3ರಷ್ಟು, ಇತರೆ ಇಲಾಖೆಗಳಲ್ಲಿ ಶೇ 2ರಷ್ಟು ಮೀಸಲಾತಿ ಕೊಡುತ್ತಿರುವುದು ಕ್ರೀಡಾಪಟುಗಳಿಗೆ ಸಹಾಯಕವಾಗುತ್ತಿದೆ. ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಮೀಸಲಾತಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಾಲ್ಯದಲ್ಲಿ ಕಬಡ್ಡಿ ಆಟಗಾರರಾಗಿದ್ದನ್ನು ಸಿದ್ದರಾಮಯ್ಯ ನೆನಪು ಮಾಡಿಕೊಂಡರು. ನಾನೊಬ್ಬ ದೊಡ್ಡ ಕ್ರೀಡಾ ಪ್ರೇಮಿ ಎಂದು ಹೇಳಿಕೊಂಡರು. ‘ಎಷ್ಟೇ ಕೆಲಸ, ಒತ್ತಡಗಳಿದ್ದರೂ ಟಿ–20 ಕ್ರಿಕೆಟ್, ಏಕದಿನ ಕ್ರಿಕೆಟ್ ಪಂದ್ಯ, ಫುಟ್‌ಬಾಲ್ ವಿಶ್ವಕಪ್ ಪಂದ್ಯ ನೋಡುತ್ತೇನೆ. ಪ್ರತಿ ಕ್ರೀಡಾಪಟುವೂ ಗುರಿ ಇಟ್ಟುಕೊಂಡು ಶ್ರಮ ವಹಿಸಿದರೆ ಒಂದಲ್ಲ ಒಂದು ದಿನ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆಲ್ಲಬಹುದು ಎಂದು ಹೇಳುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿದಿಸಿದರು.
ಸೋಲಿನಲ್ಲೂ ನಗುವಿನಿಂದ ಇರುವವನೇ ನಿಜವಾದ ಕ್ರೀಡಾಪಟು. ಕ್ರೀಡೆಯಿಂದ ಶಿಸ್ತು, ಸಂಯಮ, ಸಮಯ ಪ್ರಜ್ಞೆ ಬರುತ್ತದೆ. ಇಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳ ಮುಖ ನೋಡಿದರೆ ನಮ್ಮ ರಾಜ್ಯಕ್ಕೆ ಉತ್ತಮ ಭವಿಷ್ಯವಿದೆ ಎನಿಸುತ್ತದೆ ಎಂದರು.
ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ‘ಖೇಲೊ ಇಂಡಿಯಾ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಆಯೋಜಿಸಲು ಪ್ರಯತ್ನ ನಡೆಸಲಾಗುವುದು. ಈ ಬಗ್ಗೆ ಆಯೋಜಕರಿಗೆ ಮನವಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಒಲಂಪಿಕ್ಸ್ ಕೂಟದಲ್ಲಿ ರಾಜ್ಯದಿಂದ ಕನಿಷ್ಠ 20 ಕ್ರೀಡಾಪಟುಗಳಾದರೂ ಭಾಗವಹಿಸಬೇಕು ಎಂಬ ಕಾರಣಕ್ಕೆ ಪ್ರತಿ ವರ್ಷವೂ ರಾಜ್ಯದಲ್ಲಿ ಒಲಂಪಿಕ್ಸ್ ನಡೆಸಲಾಗುತ್ತಿದೆ. ತುಮಕೂರಿನಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಿ, ಆ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಕೇಳಿಕೊಂಡರು.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಶಾಸಕರಾದ ಕೆ.ಎನ್.ರಾಜಣ್ಣ, ಎಂ.ಟಿ.ಕೃಷ್ಣಪ್ಪ, ಕೆ.ಷಡಕ್ಷರಿ, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಎಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು, ಆರ್.ರಾಜೇಂದ್ರ, ಒಲಂಪಿಕ್ ಸಂಸ್ಥೆ ಕಾರ್ಯದರ್ಶಿ ಟಿ.ಅನಂತರಾಜು, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಕ್ರೀಡಾ ಪಟುಗಳಾದ ಅನುಪ್ ಶ್ರೀಧರ್, ಸುನಿಲ್ ಮೊದಲಾದವರು ಭಾಗವಹಿಸಿದ್ದರು.
25 ಕೋಟಿಗೆ ಬೇಡಿಕೆ
ತುಮಕೂರು: ನಗರದಲ್ಲಿ ಹಾಕಿ ಕ್ರೀಡಾಂಗಣ ಸುಸಜ್ಜಿತ ಈಜುಕೊಳ ನಿರ್ಮಾಣಕ್ಕೆ ₹25 ಕೋಟಿ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ನಗರದಲ್ಲಿ ಹಾಕಿ ಈಜು ಬಿಟ್ಟರೆ ಇತರೆ ಕ್ರೀಡೆಗಳನ್ನು ನಡೆಸಲು ಸೌಕರ್ಯ ಕಲ್ಪಿಸಲಾಗಿದೆ. ಹಾಕಿ ಈಜುಕೊಳ ನಿರ್ಮಾಣಕ್ಕೆ ನೆರವು ನೀಡಬೇಕು ಎಂದರು. ನಗರದಲ್ಲಿ ₹60 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗಿದೆ. ನಗರ ಹೊರ ವಲಯದ ಸೋರೆಕುಂಟೆ ಬಳಿ 42 ಎಕರೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. ಜತೆಗೆ ಟೆನಿಸ್ ಕೋರ್ಟ್ ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದಿರುವ ಹಾಕಿ ಕ್ರೀಡಾಂಗಣ ಈಜುಕೊಳ ನಿರ್ಮಿಸಿದರೆ ಕ್ರೀಡಾ ಚಟುವಟಿಕೆಗಳಿಗೆ ನೆರವಾಗಲಿದೆ ಎಂದು ಕೇಳಿಕೊಂಡರು. ‘ನಶೆ ಮುಕ್ತ ಕರ್ನಾಟಕ’ ನಿರ್ಮಾಣ ಮಾಡಲು ಒಲಂಪಿಕ್ಸ್ ಕೂಟವನ್ನು ಮೀಸಲಿಡಲಾಗುವುದು. ರಾಜ್ಯದಿಂದ ಡ್ರಗ್ಸ್ ನಿರ್ಮೂಲನೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಗಮನ ಸೆಳೆದ ಪಥ ಸಂಚಲನ
ಒಲಂಪಿಕ್ಸ್ ಅಂಗವಾಗಿ ನಡೆದ ಕ್ರೀಡಾಪಟುಗಳ ಪಥ ಸಂಚಲನ ಗಮನ ಸೆಳೆಯಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಕ್ರೀಡಾಪಟುಗಳು ಹೆಜ್ಜೆ ಹಾಕಿ ಕ್ರೀಡಾಪ್ರೇಮ ಮೆರೆದರು. ಶಿಸ್ತುಬದ್ಧ ನಡಿಗೆ ಗಮನ ಸೆಳೆಯಿತು. ಪಥ ಸಂಚಲನಕ್ಕೆ ಕಲಾ ತಂಡಗಳು ಮತ್ತಷ್ಟು ಮೆರುಗು ತಂದವು. ಕ್ರೀಡಾಪಟುಗಳ ಹಿಂದೆ ಸಾಗಿದ ಕಲಾವಿದರು ಕ್ರೀಡಾಂಗಣದಲ್ಲಿ ನೆರೆದಿದ್ದವರ ಮನ ಗೆದ್ದರು. ಚಂಡೆ ವಾದ್ಯ ಹುಲಿವೇಷ ಯಕ್ಷಗಾನ ಮರಗಾಲು ಡೊಳ್ಳು ಕುಣಿತ ಮಹಿಳಾ ವೀರಗಾಸೆ ಕೊಂಬು ಕಹಳೆ ಗಾರುಡಿ ಬೊಂಬೆ ಕಲಾವಿದರು ಕ್ರೀಡಾಕೂಟದ ಕಳೆಯನ್ನು ಹೆಚ್ಚಿಸಿದರು. ಸುಮಾರು 200ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿದರು.
ಕ್ರೀಡಾ ಜ್ಯೋತಿ
ರಾಷ್ಟ್ರ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಕ್ರೀಡಾ ಜ್ಯೋತಿ ಹೊತ್ತು ತಂದರು. ಎಂ.ಕೃಷಿಕ್ ಗೌತಮ್‌ಗೌಡ ಸುರಭಿ ಮಹಾಲಕ್ಷ್ಮಿ ಇತರರು ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.