ADVERTISEMENT

ಶಿರಾ ಉಪಚುನಾವಣೆ | ನೀರಾವರಿ, ಕೈಗಾರಿಕೆಗೆ ಆದ್ಯತೆ: ಡಾ.ಸಿ.ಎಂ.ರಾಜೇಶ್‌ಗೌಡ

ಸಂದರ್ಶನ

ಕೆ.ಜೆ.ಮರಿಯಪ್ಪ
Published 28 ಅಕ್ಟೋಬರ್ 2020, 2:27 IST
Last Updated 28 ಅಕ್ಟೋಬರ್ 2020, 2:27 IST
ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ
ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ   

ಸಮಾಜ ಸೇವೆ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಡಾ.ಸಿ.ಎಂ.ರಾಜೇಶ್‌ಗೌಡ ಬಿಜೆಪಿಯ ಹುರಿಯಾಳು.ವೃತ್ತಿಯಿಂದ ವೈದ್ಯರು. ಕುಟುಂಬದ ರಾಜಕೀಯ ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

* ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಕ್ಷೇತ್ರದ ಯಾವ ಭಾಗಕ್ಕೆ ಕಾಲಿಟ್ಟರೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ರಸ್ತೆ, ಕುಡಿಯುವ ನೀರು,ಒಳಚರಂಡಿ ಸೌಲಭ್ಯಗಳಿಲ್ಲ. ಮೊದಲಿಗೆ ನೀರಾವರಿ ಯೋಜನೆಗಳಿಗೆ ಆದ್ಯತೆ. ಕೈಗಾರಿಕೆಗಳನ್ನು ತರಲು ಒತ್ತು ನೀಡಲಾಗುವುದು.

ADVERTISEMENT

ಮದಲೂರು ಕೆರೆಗೆ ನೀರು ತುಂಬಿಸಿದರೆ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಿದರೆ ಕೃಷಿಗೆ ಅನುಕೂಲವಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕುಗೊಳಿಸಲಾಗುವುದು. ಹೇಮಾವತಿಯಿಂದ ಕೆರೆಗಳಿಗೆ ನೀರು ಹರಿಸಲಾಗುವುದು. ಪಕ್ಕದ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಸಾಗರದಿಂದ ನೀರು ತಂದು ಒಂದಷ್ಟು ಕೆರೆಗಳನ್ನು ಭರ್ತಿಮಾಡಲಾಗುವುದು. ಈ ಮೂರು ಯೋಜನೆಗಳನ್ನು ಸಾಕಾರಗೊಳಿಸಲು ಯೋಜನೆ ರೂಪಿಸಿಕೊಂಡಿದ್ದೇನೆ.

* ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ?

ನೀರಾವರಿ ನಂತರ ಕೈಗಾರಿಕೆಗಳ ಪ್ರಗತಿಗೆ ನೀಲನಕ್ಷೆ ಸಿದ್ಧಮಾಡಿಟ್ಟುಕೊಂಡಿದ್ದೇನೆ. ಉದ್ಯೋಗ ಸೃಷ್ಟಿಸಿ, ಯುವ ಸಮುದಾಯಕ್ಕೆ ಕೆಲಸ ಕೊಡಿಸಲು ಆದ್ಯತೆ ನೀಡಲಾಗುವುದು. ನೀರಿನ ಅಭಾವದಿಂದಾಗಿ ಕೈಗಾರಿಕೆಗಳು ಇಲ್ಲಿಗೆ ಬರುತ್ತಿಲ್ಲ. ನೀರು ಹರಿದು ಬಂದರೆ ಕೈಗಾರಿಕೆಗಳ ಸ್ಥಾಪನೆಗೆ ನೆರವಾಗುತ್ತದೆ.

ಇದಕ್ಕೆ ಪೂರಕವಾಗಿ ಕೃಷಿ ವಿಜ್ಞಾನ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ. ಜತೆಗೆ ಎಂಜಿನಿಯರಿಂಗ್ ಕಾಲೇಜು ತರಲು ಪ್ರಯತ್ನಿಸಲಾಗುವುದು. ಕೃಷಿ, ಕೈಗಾರಿಕೆ, ಉದ್ಯೋಗ ಸೃಷ್ಟಿಯ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ. ಒಂದರ ಪ್ರಗತಿ ಮತ್ತೊಂದರ ಅಭಿವೃದ್ಧಿಗೆ ಪೂರಕ ಎಂಬ ದೃಷ್ಟಿಯಿಂದ ಮುನ್ನಡೆದಿದ್ದೇನೆ.

* ವೈದ್ಯ ವೃತ್ತಿಯಿಂದ ರಾಜಕೀಯ ಪ್ರವೇಶ?

ರಾಜಕೀಯ ಮನೆತನದಿಂದ ಬಂದಿದ್ದೇನೆ. ತಂದೆ ಮೂಡಲಗಿರಿಯಪ್ಪ ಅವರು ಸಂಸದರಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಯಾವುದೇ ಕಳಂಕ ಇಲ್ಲದೆ ರಾಜಕಾರಣ ನಡೆಸಿದ್ದಾರೆ. ನಾನೂ ಸಹ ಕ್ಷೇತ್ರದ ಜನರ ಜತೆ ಸಂಪರ್ಕವಿಟ್ಟುಕೊಂಡು ನಾಲ್ಕು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ.

* ನಿಮಗೇಕೆ ಜನ ಮತ ಹಾಕಬೇಕು?

ಜನರು ಬದಲಾವಣೆ ಬಯಸಿದ್ದಾರೆ. ಹೊಸ ಮುಖ ಎದುರು ನೋಡುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಶಾಸಕರ ಅಭಿವೃದ್ಧಿ ಕೆಲಸ ಗಮನಿಸಿದ್ದಾರೆ. ನಾನು ಯುವಕನಿದ್ದು, ತಂದೆಯ ಕೆಲಸವನ್ನೂ ನೋಡಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂಬ ಭಾವನೆ ಜನರಲ್ಲಿದೆ.

* ನಿಮ್ಮ ಎದುರಾಳಿಗೆ ಏಕೆ ಮತ ಹಾಕಬಾರದು?

ಶಾಸಕರಾಗಿದ್ದ ಸತ್ಯನಾರಾಯಣ ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದರು. ಜಯಚಂದ್ರ ಅವರಿಗೆ ಅವಕಾಶ ಕೊಟ್ಟು ನೋಡಿದ್ದಾರೆ. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಸಮರ್ಥರನ್ನು ಆಯ್ಕೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.