ADVERTISEMENT

ತುಮಕೂರು: ದೂರ ಸರಿದ ಪರೀಕ್ಷೆ ಭಯ, ಮೊದಲ ದಿನ ಸುಸೂತ್ರ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 312 ವಿದ್ಯಾರ್ಥಿಗಳು ಗೈರು, ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 14:40 IST
Last Updated 31 ಮಾರ್ಚ್ 2023, 14:40 IST
ತುಮಕೂರಿನ ಎಂಪ್ರೆಸ್‌ ಶಾಲೆಯ ಪರೀಕ್ಷಾ ಕೇಂದ್ರದ ಬಳಿ ಶುಕ್ರವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಪರಿಶೀಲಿಸಿದರು 
ತುಮಕೂರಿನ ಎಂಪ್ರೆಸ್‌ ಶಾಲೆಯ ಪರೀಕ್ಷಾ ಕೇಂದ್ರದ ಬಳಿ ಶುಕ್ರವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಪರಿಶೀಲಿಸಿದರು    

ತುಮಕೂರು: ‘ಕನ್ನಡ ಪಶ್ನೆ ಪತ್ರಿಕೆ ತುಂಬಾ ಸುಲಭ ಅನ್ನಿಸಿತು. ಮನಸ್ಸಿನಲ್ಲಿದ್ದ ಪರೀಕ್ಷೆಯ ಭಯ ದೂರು ಮಾಡಿತು. ಯಾವುದೂ ಕಷ್ಟ ಆಗಲಿಲ್ಲ’.

ಹೀಗೆ ಹೇಳಿದ್ದು ರೇಣುಕಾ ವಿದ್ಯಾಪೀಠದ ವಿದ್ಯಾರ್ಥಿನಿ ಪಲ್ಲವಿ. ಶುಕ್ರವಾರ ನಗರದ ಎಂಪ್ರೆಸ್‌ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಿಂದ ಹೊರ ಬಂದ ನಂತರ ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

‘ಓದಿದ, ಅಭ್ಯಾಸ ಮಾಡಿದ ಎಲ್ಲ ವಿಷಯಗಳು ಪ್ರಶ್ನೆ ಪತ್ರಿಕೆಯಲ್ಲಿ ಕಂಡು ಸಂತೋಷವಾಯಿತು. ಮೌಲ್ಯಮಾಪಕರು ಗಮನವಿಟ್ಟು ನೋಡಿದರೆ ಒಳ್ಳೆಯ ಅಂಕಗಳು ಬರುತ್ತವೆ’ ಎಂದು ಉತ್ಸಾಹದಿಂದಲೇ ಹೇಳಿದರು.

ADVERTISEMENT

ಮೊದಲ ದಿನ ಕನ್ನಡ, ಸಂಸ್ಕೃತ, ಉರ್ದು ಭಾಷೆಗಳಿಗೆ ಪರೀಕ್ಷೆ ನಡೆಯಿತು. ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ನಡೆಯಿತು. ಎಲ್ಲ ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷಾ ಕೇಂದ್ರಗಳಿಂದ ಹೊರ ಬಂದರು. ನಗರದ ಎಂಪ್ರೆಸ್‌ ಶಾಲೆ, ಸರ್ಕಾರಿ ಕಾಲೇಜು ಸೇರಿದಂತೆ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 91 ಪರೀಕ್ಷಾ ಕೇಂದ್ರ, ಮಧುಗಿರಿ ವ್ಯಾಪ್ತಿಯಲ್ಲಿ 64 ಸೇರಿ ಜಿಲ್ಲೆಯ 155 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಮಕ್ಕಳಿಗಾಗಿ ಪೋಷಕರು ಕೇಂದ್ರಗಳ ಮುಂದೆ ಕಾದು ಕುಳಿತಿದ್ದ ದೃಶ್ಯಗಳು ಕಂಡು ಬಂದವು. ಮಧ್ಯಾಹ್ನದ ಬಿಸಿಲು ಲೆಕ್ಕಿಸದೆ ತಮ್ಮ ಮಕ್ಕಳ ಬರುವಿಕೆಗೆ ಕೇಂದ್ರಗಳ ಮುಂದೆ ಕಾಯುತ್ತಿದ್ದರು. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೇಂದ್ರಗಳ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

312 ವಿದ್ಯಾರ್ಥಿಗಳು ಗೈರು: ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಣಿಯಾದ 21,010 ವಿದ್ಯಾರ್ಥಿಗಳ ಪೈಕಿ 20,856 ಮಂದಿ ಪರೀಕ್ಷೆ ಬರೆದರು. 154 ಜನ ಗೈರು ಹಾಜರಾಗಿದ್ದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 12,129 ನೋಂದಣಿಯಾಗಿದ್ದು, 11,971 ಹಾಜರಾದರೆ, 158 ಮಂದಿ ಪರೀಕ್ಷೆಯಿಂದ ದೂರ ಉಳಿದಿದ್ದರು.

ನಗರದ ಎಂಪ್ರೆಸ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
**
ಕಷ್ಟ ಎನಿಸಲಿಲ್ಲ

ಪ್ರಥಮ ಭಾಷೆ ಉರ್ದು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕಷ್ಟ ಎನಿಸಲಿಲ್ಲ. ತುಂಬಾ ಸುಲಭವಾಗಿ ಪರೀಕ್ಷೆ ನಡೆಯಿತು. ಅಭ್ಯಾಸಕ್ಕೆ ಹೆಚ್ಚಿನ ಸಮಯ ಇತ್ತು. ಮುಂದಿನ ಪರೀಕ್ಷೆಗಳಿಗೆ ಅಭ್ಯಾಸ ನಡೆಯುತ್ತಿದೆ. ಉತ್ತಮ ಅಂಕ ಬರುವ ನಂಬಿಕೆ ಇದೆ.
-ಸಾನಿಯಾ, ಎಂಪ್ರೆಸ್‌ ಪ್ರೌಢಶಾಲೆ, ತುಮಕೂರು

**

ಪರೀಕ್ಷೆ ಭಯ ಇತ್ತು
ಮೊದಲ ದಿನ ಪರೀಕ್ಷೆಯ ಭಯ ಇತ್ತು. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಒಂದೆರಡು ಪ್ರಶ್ನೆ ಕಷ್ಟಕರವಾಗಿತ್ತು. ಅವು ಬಿಟ್ಟರೆ ಉಳಿದ ಎಲ್ಲವೂ ನಾವು ಓದಿಕೊಂಡಿದ್ದ ಪ್ರಶ್ನೆಗಳೇ ಬಂದಿದ್ದವು. ಮುಂದಿನ ಪರೀಕ್ಷೆಗಳನ್ನು ಯಾವುದೇ ಆತಂಕ ಇಲ್ಲದೆ ಬರೆಯುತ್ತೇನೆ.
-ಆರ್.ಶ್ರೀನಿವಾಸ್‌, ವಿದ್ಯಾನಿಕೇತನ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.