ADVERTISEMENT

ಗ್ರೀನ್‌ಫೀಲ್ಡ್ ಹೆದ್ದಾರಿಗೆ ಕೆಂಕೆರೆ ಗ್ರಾಮಸ್ಥರ ಒತ್ತಾಯ: ಸೋಮಣ್ಣಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 13:41 IST
Last Updated 3 ಜುಲೈ 2025, 13:41 IST
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮಸ್ಥರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು 
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮಸ್ಥರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು    

ಹುಳಿಯಾರು: ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಲಿರುವ ಭಾರತಮಾಲಾ ಪರಿಯೋಜನೆಯ ನಾಲ್ಕು ಪಥಗಳ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿ ಯೋಜನೆ ಕಾರ್ಯಗತಗೊಳಿಸುವಂತೆ ಗ್ರಾಮಸ್ಥರು ಕೇಂದ್ರ ಸಚಿವ ಸೋಮಣ್ಣ ಅವರಿಗೆ ಗುರುವಾರ ಮನವಿ ಮಾಡಿದರು.

ಹೆದ್ದಾರಿಯು ಹಾಸನ, ಹುಳಿಯಾರು ಮತ್ತು ಹಿರಿಯೂರುಗಳನ್ನು ಸಂಪರ್ಕಿಸಲಿದ್ದು, ಹೊಸ ರಾಷ್ಟ್ರೀಯ ಹೆದ್ದಾರಿ ಕೆಂಕೆರೆ ಗ್ರಾಮ ಪಂಚಾಯಿತಿ ಮೂಲಕ ಹಾದುಹೋಗುತ್ತಿದೆ. ಸುಮಾರು 40 ರೈತರ ಜಮೀನುಗಳು ಸ್ವಾಧೀನಪಡಿಸಿಕೊಳ್ಳಬೇಕಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರೈತರಿಗೆ ಯಾವುದೇ ರೀತಿಯ ಜಮೀನು ಗುರುತಿಸುವಿಕೆ ಮಾಹಿತಿ ನೀಡಿಲ್ಲ. ಭೂ ಸ್ವಾಧೀನಪಡಿಸಿಕೊಳ್ಳಲು ನಾಲ್ಕು ವರ್ಷಗಳ ಹಿಂದೆ ನೋಟಿಸ್‌ ನೀಡಿದ್ದು ಬಿಟ್ಟರೆ ಬೇರೆ ಪ್ರಗತಿಯಾಯಾಗಿಲ್ಲ.  ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಹೆದ್ದಾರಿ ಕಾಮಗಾರಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ರೈತರ ಜಮೀನು ಅಳೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. 

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ, ಕೆಲವು ಯೋಜನೆಗಳನ್ನು ಮಾಡುವ ಸಂದರ್ಭದಲ್ಲಿ ಕೆಲವರಿಗೆ ಸಮಸ್ಯೆ ಆಗುವುದು ಸಹಜ. ಈ ಬಗ್ಗೆ ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದರು.

ADVERTISEMENT

ಹವಾಮಾನ ಆಧಾರಿತ ವಿಮೆ: ಹವಾಮಾನ ಬದಲಾವಣೆಯಿಂದಾಗಿ ತೆಂಗು ಬೆಳೆಗಳಿಗೆ ನೀರಾವರಿ ಸೌಲಭ್ಯ ಕಡಿಮೆಯಾಗಿದೆ. ರೋಗಗಳಿಂದ ಅಪಾರ ನಷ್ಟವಾಗಿದೆ. ತೆಂಗು ಈ ಭಾಗದ ಪ್ರಮುಖ ಹಾಗೂ ಸಾಂಪ್ರದಾಯಿಕ ಬೆಳೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ತೆಂಗಿನ ಇಳುವರಿ ತೀವ್ರ ಕುಸಿತವಾಗಿದೆ. ಆದ್ದರಿಂದ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಹವಾಮಾನ ಆಧಾರಿತ ವಿಮೆ ಕಲ್ಪಿಸಬೇಕು ಎಂದು ಕೆಂಕೆರೆ ಹೊನ್ನಪ್ಪ ಮನವಿ ಮಾಡಿದರು.

2017ರ ನಂತರ ಈ ವಿಮೆ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ಹೊಸದಾಗಿ ಅದರ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಸಿ.ಬಿ. ಸುರೇಶ್‌ಬಾಬು, ಮಾಜಿ ಸಂಸದ ಬಸವರಾಜು ಹಾಜರಿದ್ದ‌ರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.