
ತುಮಕೂರಿನಲ್ಲಿ ಮಂಗಳವಾರ ಮುಕ್ತಾಯವಾದ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ತಂಡ ಗೆಲುವು ಸಾಧಿಸಿತು
ತುಮಕೂರು: ನಗರದ ವಿಶ್ವವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ಮುಕ್ತಾಯವಾದ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್ ಶಿಪ್‌ನ ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕೊಕ್ಕೊ ಇಂಡಿಯಾ, ರಾಜ್ಯ ಅಮೆಚೂರ್ ಕೊಕ್ಕೊ ಅಸೋಸಿಯೇಷನ್ ವತಿಯಿಂದ ಚಾಂಪಿಯನ್ ಶಿಪ್ ಆಯೋಜಿಸಲಾಗಿತ್ತು. ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು ಎದುರಿಸಿತು. ನಿಗದಿತ ಸಮಯಕ್ಕೆ ಇನ್ನೂ ಮೂರು ನಿಮಿಷದ ಆಟ ಬಾಕಿ ಇರುವಾಗಲೇ 13–14 ಅಂಕಗಳಿಂದ ಗೆಲುವು ಪಡೆಯಿತು.
ಮಂಗಳವಾರ ಬೆಳಿಗ್ಗೆ ನಡೆದ ಸೆಮಿಫೈನಲ್‌ನಲ್ಲಿ ಚಂಡೀಗಢ ವಿರುದ್ಧ 26–04 ಪಾಯಿಂಟ್ಸ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಅಂತಿಮ ಪಂದ್ಯದಲ್ಲಿ ತಮಿಳುನಾಡು ತಂಡಕ್ಕೆ ಸೋಲುಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಕರ್ನಾಟಕದ ಪರ ಮೌನೇಶ್, ಶಿವಪ್ಪ ಉತ್ತಮ ಆಟವಾಡಿದರು. ತಮಿಳುನಾಡು ಆಟಗಾರ ಆರ್.ಶಿವ ಮಿಂಚಿದರು.
ಕರ್ನಾಟಕ ತಂಡದ ನಾಯಕ ಮಲ್ಲಿಕಾರ್ಜುನ ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ತವರು ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದ ತಂಡವನ್ನು ಮುನ್ನಡೆಸಿ, ಪ್ರಶಸ್ತಿ ಗೆಲ್ಲುವ ಮೂಲಕ ಗಮನ ಸೆಳೆದರು.
ಮಹಿಳೆಯರ ವಿಭಾಗದಲ್ಲಿ ತಮಿಳುನಾಡು ತಂಡ ಪಂಜಾಬ್ ವಿರುದ್ಧ 8–6 ಅಂಕಗಳಿಂದ ಜಯ ಸಾಧಿಸಿತು. ರಾಜ್ಯದ ಮಹಿಳೆಯರ ತಂಡ ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಸೋಲನುಭವಿಸಿತು. ಪಂದ್ಯಾವಳಿ ಆರಂಭದಿಂದ ಉತ್ತಮ ಆಟವಾಡಿದ ಮಹಿಳೆಯರು ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು.
ಪುರುಷರ ವಿಭಾಗದಲ್ಲಿ ತಮಿಳುನಾಡಿನ ಆರ್.ಶಿವ ಉತ್ತಮ ಡಿಫೆಂಡರ್, ಒಡಿಶಾದ ಮನು ಬೆಹರಾ ಉತ್ತಮ ಅಟ್ಯಾಕರ್, ಕರ್ನಾಟಕದ ಮೌನೇಶ್ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು. ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿನ ಎಸ್.ತಮರಿಯಾ ಉತ್ತಮ ಡಿಫೆಂಡರ್, ಕರ್ನಾಟಕದ ವೈ.ಸಾಹಿತ್ಯ ಉತ್ತಮ ಅಟ್ಯಾಕರ್, ಪಂಜಾಬ್‌ನ ಖುಷ್‌ಪ್ರೀತ್ ಕೌರ್ ಆಲ್‌ರೌಂಡರ್ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.