
ಕೊಡಿಗೇನಹಳ್ಳಿ: ‘ಹೋಬಳಿಯ ಚಿಕ್ಕಮಾಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಮತ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಶನಿವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಶನಿವಾರ ಬೆಳಿಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳದೆ, ‘ಮುಖ್ಯಶಿಕ್ಷಕಿ ನಮಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಶಾಲೆ ಮುಂದೆ ಜಮಾಯಿಸಿ ಪ್ರತಿಭಟಿಸಿದರು.
ಮುಖ್ಯ ಶಿಕ್ಷಕಿ ತರಗತಿಗೆ ತೆರಳುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದಾಗ, ‘ಶೌಚಕ್ಕೆ ಬಿಡುವುದಿಲ್ಲ, ಸರಿಯಾಗಿ ಮೊಟ್ಟೆ, ಬಾಳೆಹಣ್ಣು ನೀಡುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಶಾಲೆಯ ಶೌಚಾಲಯದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಶೌಚಾಲಯಕ್ಕೆ ಹೋಗಲು ಬಿಡುವುದಿಲ್ಲ. ಮೂರು ತಿಂಗಳಿನಿಂದ ಇಲ್ಲಿ ಹಿಂದಿ ಟೀಚರ್ ಇಲ್ಲದೆ ಸಮಸ್ಯೆಯಾಗಿದೆ ಎಂದು ದೂರಿದರು.
ಪಿಎಸ್‌ಐ ಶ್ರೀನಿವಾಸಪ್ರಸಾದ್ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು. ಮಕ್ಕಳ ಶಿಕ್ಷಣಕ್ಕೆ ಕುಂದು ಬರದಂತೆ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕರಿಗೆ ಸೂಚಿಸಿದರು.
‘ವರ್ಷವಾದರೂ ಪೋಷಕರ ಸಭೆ ಕರೆದಿಲ್ಲ. ಕರೆದರೂ ಸಭೆಯಲ್ಲಿ ನಾವು ಮತ್ತು ಶಿಕ್ಷಕರು ಹೇಳುವ ಮಾತನ್ನು ಮುಖ್ಯ ಶಿಕ್ಷಕರು ಕೇಳುವುದಿಲ್ಲ. ಇದರಿಂದ ಶಾಲೆಗೆ ಕೆಟ್ಟ ಹೆಸರು ಬರುವಂತಾಗಿದೆ’ ಎಂದು ಎಸ್.ಡಿ.ಎಂ.ಸಿ. ಸದಸ್ಯ ಗೋಪಾಲ್ ದೂರಿದರು.
ಮೇಲಧಿಕಾರಿಗಳಿಗೆ ಮಾಹಿತಿ
‘ಕೆಲ ಶಿಕ್ಷಕರು ಕೆಲವು ಮಕ್ಕಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ಸುಖಾಸುಮ್ಮನೆ ಗಲಾಟೆ ಮಾಡಿಸುತ್ತಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೆಲ ಮಕ್ಕಳು ಕೆಲವರ ಮಾತು ಕೇಳಿ ಶಿಸ್ತು ಮೀರಿ ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಬೇಸರವಾಗುತ್ತಿದೆ’ ಎಂದು ಮುಖ್ಯ ಶಿಕ್ಷಕಿ ಮಮತ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.