ADVERTISEMENT

ಕೊರಮ, ಕೊರಚ ಅಭಿವೃದ್ದಿ ನಿಗಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:41 IST
Last Updated 4 ಅಕ್ಟೋಬರ್ 2020, 3:41 IST

ತುಮಕೂರು: ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ 2013-14ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವಂತೆ ಕೊರಮ, ಕೊರಚ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ನಿಗಮಕ್ಕೆ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಜನಸಂಖ್ಯೆಗೆ ಅನುಗುಣವಾಗಿ ಸುಮಾರು ₹ 740 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರ ನೀಡುತ್ತಿರುವ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೌಲಭ್ಯಗಳು ಈ ಜಾತಿ ಪಟ್ಟಿಯಲ್ಲಿರುವ ಪ್ರಭಾವಿಗಳೇ ಬಳಸಿಕೊಳ್ಳುತ್ತಿದ್ದಾರೆ. ಕೊರಚ, ಕೊರಮ ಸಮುದಾಯಗಳು ಎಲ್ಲ ವಿಚಾರದಲ್ಲಿಯೂ ಹಿಂದುಳಿದಿವೆ. ಆದ್ದರಿಂದ ಸಮುದಾಯಗಳ ಅಭಿವೃ‌ದ್ಧಿಗೆ ಪ್ರತ್ಯೇಕ ನಿಗಮದ ಅಗತ್ಯವಿದೆ’ ಎಂದರು.

2013-14ರಲ್ಲಿ ಸರ್ಕಾರ ನಿಗಮ ಸ್ಥಾಪಿಸುವುದಾಗಿ ಘೋಷಿಸಿ, ₹ 5 ಕೋಟಿ ಅನುದಾನವನ್ನು ನೀಡಿತ್ತು. ನಂತರ ಪ್ರಸ್ತಾಪ ಕೈಬಿಡಲಾಯಿತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಲ್ಲಿಯೇಪ್ರತ್ಯೇಕ ಅಭಿವೃದ್ಧಿ ಕೋಶಮಾಡಿ ₹ 150 ಕೋಟಿ ಅನುದಾನ ನೀಡಿತ್ತು. ಆದರೆ ಆ ನಂತರ ಬಂದ ಸರ್ಕಾರಗಳು ನಮ್ಮನ್ನು ಕಡೆಗಣಿಸಿವೆ ಎಂದು ಆರೋಪಿಸಿದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿರುವ ಗೋವಿಂದ ಕಾರಜೋಳ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯವಹಿಸಿದ್ದಾರೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಶಿರಾ ಉಪಚುನಾವಣೆ ಹಾಗೂ ಇತರೆ ಚುನಾವಣೆಗಳಲ್ಲಿ ಕುಳುವ ಸಮಾಜ ರಾಜ್ಯ ಸರ್ಕಾರದ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಕುಮಾರ್ ಏಕಲವ್ಯ, ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷೆ ಸುಗುಣಾ ಆಶ್ವತ್ಥ, ತುಮಕೂರು ನಗರಸಭೆ ಮಾಜಿ ಸದಸ್ಯ ಶಿವರಾಮ್, ನಾಗಮ್ಮ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.