ಕೊರಟಗೆರೆ: ತಾಲ್ಲೂಕಿನಲ್ಲಿ ಕುಂಬಾರಿಕೆ ನಶಿಸುತ್ತಿದೆ. ಮಣ್ಣಿನ ವಸ್ತುಗಳ ಜಾಗವನ್ನು ಈಗ ಪ್ಲಾಸ್ಟಿಕ್, ಸ್ಟೀಲ್, ಗ್ಲಾಸ್ ವಸ್ತುಗಳು ತುಂಬಿವೆ.
ಮಣ್ಣಿನ ಪಾತ್ರೆಗಳೆಂದರೆ ‘ಹಳೆಯದ್ದೆ’ ಎಂಬ ಧೋರಣೆ ಜನಮನದಲ್ಲಿ ಬೇರೂರಿದೆ. ಕಡಿಮೆ ಬೆಲೆ ಹಾಗೂ ಸುಲಭ ಬಳಕೆಗೆ ಲಭ್ಯವಾದ ಇತರ ವಸ್ತುಗಳ ಮಣ್ಣಿನ ಪಾತ್ರೆಗಳ ಬೇಡಿಕೆಯನ್ನು ಕುಗ್ಗಿಸಿದೆ.
ಕುಂಬಾರಿಕೆ ಕೇವಲ ಕಲೆ ಅಲ್ಲ. ಅದು ಜೀವನೋಪಾಯ. ಜನರು ಮಣ್ಣಿನ ಪಾತ್ರೆಗಳಿಂದ ದೂರ ಸರಿದಂತೆ, ಈ ಕಲೆಯ ಮೇಲೆ ಅವಲಂಬಿತವಾದ ಸಾವಿರಾರು ಕುಂಬಾರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಪರಂಪರೆಯಿಂದ ಬಂದಿರುವ ಈ ಕುಶಲತೆಗೆ ತಕ್ಕ ಗೌರವ ಹಾಗೂ ಬೆಂಬಲ ಸಿಗದಿರುವುದರಿಂದ ಹೊಸ ತಲೆಮಾರಿನವರು ಈ ವೃತ್ತಿಯಿಂದ ದೂರ ಸರಿಯುತ್ತಿದ್ದಾರೆ.
ಪ್ಲಾಸ್ಟಿಕ್ ಮತ್ತು ಲೋಹದ ಪಾತ್ರೆಗಳಿಗೆ ಬದಲಾಗಿ ಮಣ್ಣಿನ ಪಾತ್ರೆಗಳನ್ನು ಬಳಸುವುದು ಪರಿಸರ ಮತ್ತು ಆರೋಗ್ಯಕ್ಕೆ ಲಾಭಕಾರಿ. ಮಣ್ಣಿನ ಸಂವೇದನೆ, ಅದರ ಸುಗಂಧ, ತಂಪು ಮರೆಯಲಾಗದ ಅನುಭವ ನೀಡುತ್ತದೆ.
ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಮಣ್ಣಿನ ಪಾತ್ರೆಗಳನ್ನು ಶುದ್ಧ ಎಂದು ಪರಿಗಣಿಸಲಾಗುತ್ತಿತ್ತು. ಪೂಜೆ, ನದಿಯಲ್ಲಿ ಸ್ನಾನ ಅಥವಾ ಆಹಾರ ಸೇವನೆಗೆ ಮಣ್ಣಿನ ಪಾತ್ರೆಗಳ ಮಹತ್ವ ಹೆಚ್ಚಿತ್ತು. ಇದೊಂದು ಜೀವಶೈಲಿಯ ಭಾಗವಾಗಿತ್ತು. ಆದರೆ ಇಂದಿನ ‘ಮಾರ್ಕೆಟ್ ಶೈಲಿ’ ಬದುಕಿನಲ್ಲಿ ಈ ಮೌಲ್ಯಗಳಿಗೆ ಬೆಲೆ ಕಡಿಮೆಯಾಗಿದೆ.
ಪ್ಲಾಸ್ಟಿಕ್ ಉತ್ಪನ್ನಗಳು ಇಂದು ಎಲ್ಲೆಲ್ಲೂ ಪ್ರವೇಶಿಸುತ್ತಿವೆ. ಇದರ ಪರಿಣಾಮವಾಗಿ ಪರಿಸರ, ಮನುಷ್ಯನ ದೇಹಕ್ಕೆ ಹಾಗೂ ಪಶುಪಕ್ಷಿಗಳಿಗೆ ಅಪಾರ ಹಾನಿಯಾಗಿದೆ. ತ್ಯಾಜ್ಯ ಪ್ಲಾಸ್ಟಿಕ್ ನೂರಾರು ವರ್ಷಗಳವರೆಗೂ ನೆಲದಿಂದ ಹೊರಹೋಗದೆ ಉಳಿಯುತ್ತದೆ. ಆದರೆ ಮಣ್ಣಿನ ವಸ್ತುಗಳು ನೈಸರ್ಗಿಕವಾಗಿ ಮಣ್ಣಿಗೆ ಬೆರೆತುಹೋಗುತ್ತವೆ.
ಒಂದೇ ಸಲ ಬಳಸಿ ತ್ಯಾಜ್ಯವಾಗುವ ಪ್ಲಾಸ್ಟಿಕ್ ಪಾತ್ರೆಗಳ ಬದಲಿಗೆ ಮಣ್ಣಿನ ತಾತ್ಕಾಲಿಕ ಪಾತ್ರೆಗಳನ್ನು ಬಳಸುವುದು ಪರಿಸರ ಸಂರಕ್ಷಣೆಗೆ ದೊಡ್ಡ ಹೆಜ್ಜೆಯಾಗಿದೆ. ಮಣ್ಣಿನ ಗಿಣ್ಣಿ, ತಟ್ಟೆ, ಕುಡಿಕೆಗಳು ಮರುಬಳಕೆಗೂ ಯೋಗ್ಯವಾಗಿವೆ ಎನ್ನುತ್ತಾರೆ ಪರಿಸರ ತಜ್ಞರು.
ಬೇಸಿಗೆ ಬಂದಾಗ ಒಂದಷ್ಟು ನೀರಿನ ಅರವಿಗಳಿಗೆ ಬೇಡಿಕೆ ಬರುತ್ತದೆ. ಉಳಿದಂತೆ ಮಣ್ಣಿನ ಮಡಿಕೆಗಳನ್ನು ಕೇಳುವವರೆ ಇಲ್ಲ. ಇದನ್ನೇ ನಂಬಿಕೊಂಡು ಬಂದಿದ್ದೇವೆ. ಅದನ್ನು ಬಿಟ್ಟು ಬೇರೆ ಕಸುಬು ಗೊತ್ತಿಲ್ಲ. ಸಂತೆಗಳಿಗೆ ಮಡಿಕೆ ಮಾರಾಟಕ್ಕೆ ಹೋಗುತ್ತೇವೆ. ಒಮ್ಮೊಮ್ಮೆ ಕೂಲಿಯೂ ಹುಟ್ಟುವುದಿಲ್ಲಶಿವಣ್ಣ ಇರಕಸಂದ್ರ ಕಾಲೊನಿ
ಬೇಡಿಕೆ ಇಲ್ಲದ ಕಾರಣಕ್ಕೆ ನಮ್ಮ ಕಸುಬು ಮಾಡುವವರು ಕಡಿಮೆಯಾಗಿದೆ. ಬೇಸಿಗೆಯಲ್ಲಿ ಅರವಿಗಳ ಬದಲಾಗಿ ಕೊಳಾಯಿ ಅಳವಡಿಸಿ ಮಣ್ಣಿನ ಹೂಜಿ ಮಾದರಿ ಮಡಿಕೆಗಳನ್ನು ತಯಾರಿಸಲಾಗುತ್ತಿದೆ. ಅದಕ್ಕೆ ಬೇಸಿಗೆಯಲ್ಲಿ ಸ್ವಲ್ಪ ಬೇಡಿಕೆ ಇದೆ. ಉಳಿದಂತೆ ಮದುವೆ ಸಾವಿನ ಸಂದರ್ಭದಲ್ಲಿ ಮಾರಾಟವಾಗುತ್ತವೆ.ಪೂರ್ಣಿಮ, ಕೊರಟಗೆರೆ
ನಮ್ಮ ಕುಟುಂಬ ಕುಂಬಾರಿಕೆ ನಂಬಿಕೊಂಡು ಜೀವನ ನಡೆಸಿಕೊಂಡು ಬಂದಿದೆ. ಮಡಿಕೆ ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಆಗ ಲಾಭ ಇತ್ತು. ಈಗ ಮನೆಯಲ್ಲಿ ಕಸುಬು ಮಾಡುವವರಿಲ್ಲ. ಆದರೂ ತಯಾರು ಮಾಡುವ ಕಡೆ ಖರೀದಿ ಮಾಡಿ ಮಾರಾಟ ಮಾಡುತ್ತೇನೆಕಾಮಾಕ್ಷಮ್ಮ ಕುಂಬಾರಬೀದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.