
ಕೊರಟಗೆರೆ: ಬಿರುಕುಬಿಟ್ಟ ಗೋಡೆ, ಹಾಳಾದ ಕಿಟಕಿ, ಬಾಗಿಲು, ಯೋಗ್ಯವಿಲ್ಲದ ಶೌಚಾಲಯ, ಜೋರು ಮಳೆಗೆ ಸೋರುವ ಚಾವಣಿ ನಡುವೆ ಪುಟಾಣಿ ಮಕ್ಕಳ ಕಲಿಕೆ..
ಇದು ತಾಲ್ಲೂಕಿನ ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಕೇಂದ್ರದ ಸ್ಥಿತಿ.
ಪಟ್ಟಣಕ್ಕೆ ಕೂಗಳತೆ ದೂರದಲ್ಲೇ ಇರುವ ಈ ಗ್ರಾಮದ ಅಂಗನವಾಡಿಯಲ್ಲಿ 15ಕ್ಕೂ ಹೆಚ್ಚು ಮಕ್ಕಳು ಇದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯತಿ ಮೇಲ್ದರ್ಜೆಗೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲುಗುಟ್ಟರಹಳ್ಳಿ ಗ್ರಾಮವೂ ಪುರಸಭೆ ವ್ಯಾಪ್ತಿಗೆ ಸೇರುವ ನಿರೀಕ್ಷೆಯಲ್ಲಿದೆ. ಆದರೆ ಇಲ್ಲಿನ ಅಂಗನವಾಡಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಗೋಡೆಗಳಲ್ಲಿ ಉದ್ದಕ್ಕೂ ಬಿರುಕು ಕಾಣುತ್ತಿದ್ದು, ಕಿಟಕಿ, ಬಾಗಿಲು ಸಂಪೂರ್ಣ ಹಾಳಾಗಿವೆ. ಮಕ್ಕಳು ಆಟವಾಡುವಾಗಲೇ ಗೋಡೆಗಳಿಂದ ಸಿಮೆಂಟ್ ಉದುರುವ ದೃಶ್ಯ ಸಾಮಾನ್ಯವಾಗಿದೆ. ಮಳೆ ಬಂದರೆ ನೀರು ಒಳಹೊಕ್ಕು ನೆಲ ತೇವವಾಗಿ ಜಾರಿ ಬೀಳುವ ಸ್ಥಿತಿ ಇದೆ.
ಅಂಗನವಾಡಿ ಕೇಂದ್ರದ ಶೌಚಾಲಯ ವರ್ಷಗಳಿಂದ ಬಳಕೆಗೆ ಯೋಗ್ಯವಾಗಿಲ್ಲ. ಬಾಗಿಲು ಮುರಿದು ಹೋಗಿದ್ದು, ಒಳಭಾಗದಲ್ಲಿ ಕಸ ಮತ್ತು ಕೀಟಗಳ ನೆಲೆ ನಿರ್ಮಾಣವಾಗಿದೆ. ಪುಟಾಣಿ ಮಕ್ಕಳು ಶೌಚಕ್ಕೆ ಬಯಲನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.
ಹಲವು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯಾಗುತ್ತಿದ್ದರೂ ಕಟ್ಟಡದ ದುಸ್ಥಿತಿ ಕಾರಣದಿಂದ ಕೆಲ ಪೋಷಕರು ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.