ADVERTISEMENT

ಕೊರಟಗೆರೆ:‌ ಬೊಂಬೆ ಮಾರುವ ಕುಟಂಬಕ್ಕಿಲ್ಲ ಆರ್ಥಿಕ ಭದ್ರತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:32 IST
Last Updated 25 ಜುಲೈ 2025, 4:32 IST
ಹೆದ್ದಾರಿ ಬದಿ ಗೊಂಬೆ ಮಾರಾಟ 
ಹೆದ್ದಾರಿ ಬದಿ ಗೊಂಬೆ ಮಾರಾಟ    

ಕೊರಟಗೆರೆ:‌ ರಾಜಸ್ಥಾನದ ಬಡ ಕುಟುಂಬವೊಂದು ಎರಡು ದಶಕದಿಂದ ಪಟ್ಟಣದಲ್ಲಿ ನೆಲೆಸಿದೆ. ಬೊಂಬೆಗಳ ಮಾರಾಟ ಮಾಡುತ್ತ ಗುಡಿಸಲಿನಲ್ಲಿ ಆರು ಪುಟ್ಟ ಮಕ್ಕಳೊಂದಿಗೆ ದಂಪತಿಯ ಜೀವನ ಸಾಗುತ್ತಿದೆ. ಮೂಲ ಸೌಕರ್ಯಗಳಿಂದ ಈ ಕುಟುಂಬ ಸಂಪೂರ್ಣ ವಂಚಿತವಾಗಿದೆ.

ಇಪ್ಪತ್ತೈದು ವರ್ಷಗಳಿಂದಲೂ ಹೆದ್ದಾರಿ ಬದಿಯಲ್ಲೇ ಇವರ ಜೀವನ. ರಾಜಸ್ಥಾನದ ಪಲ್ಲಿ ಜಿಲ್ಲೆಯ ಗುದವಾಸ್ ಗ್ರಾಮದ ಈ ಕುಟುಂಬದ ಯಜಮಾನ ಚನ್ನಾರಾಂ. ಹೆದ್ದಾರಿ ಬದಿಯ ಸಣ್ಣ ಬಾಡಿಗೆ ಜಾಗದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಪಿಒಪಿಗಳಿಂದ ಮಾಡಿದ ವಿವಿಧ ಬಗೆಯ ಬೊಂಬೆಗಳ ಮಾರಾಟ ಇವರ ನಿತ್ಯದ ಕಾಯಕ. ಆಧಾರ್‌ ಕಾರ್ಡ್, ರೇಷನ್ ಕಾರ್ಡ್, ಮತದಾನ ಗುರುತಿನ ಚೀಟಿ ಯಾವುದೂ ಇಲ್ಲದ ಕಾರಣ ಸರ್ಕಾರದ ಯಾವುದೇ ಸೌಲಭ್ಯಗಳು ಇವರಿಗೆ ದೊರೆಯುತ್ತಿಲ್ಲ.

ಮಣ್ಣು ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ನಿರ್ಮಿಸುವ ಬೊಂಬೆಗಳಿಗೆ ಬಣ್ಣ ಬಳಿದು, ಅದನ್ನು ರಸ್ತೆ ಬದಿ, ಸಂತೆ, ಜಾತ್ರೆಗಳಲ್ಲಿ ಮಾರುವುದು ಇವರ ದಿನಚರಿ. ಗಣೇಶ, ಲಕ್ಷ್ಮಿ, ಸರಸ್ವತಿ, ಆಂಜನೇಯ, ವೆಂಕಟೇಶ ‌ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ಮೊದಲಾದ ಮಹನೀಯರ ಬೊಂಬೆಗಳು ಇಲ್ಲಿ ಮಾರಾಟಕ್ಕೆ ಸಾಲುಗಟ್ಟಿ ನಿಂತಿವೆ.

ADVERTISEMENT

ಬೊಂಬೆಗಳ ಮಾರಿದ ಹಣದಿಂದ ಮಕ್ಕಳಿಗೆ ಊಟ, ಕುಟುಂಬಕ್ಕೆ ಅನ್ನ. ಶಾಲೆ ದೂರದ ಕನಸು. ಮಕ್ಕಳು ಬೊಂಬೆ ಮಾರಾಟದಲ್ಲಿ ತೊಡಗುತ್ತಿದ್ದು, ಬಾಲ್ಯದ ಕನಸು, ಶಿಕ್ಷಣ, ಆಟ, ಪಾಠಗಳಿಂದ ವಂಚಿತರಾಗುತ್ತಿದ್ದಾರೆ.

‘ನಾನು ಸಣ್ಣವನಿದ್ದಾಗ ಇಲ್ಲಿಗೆ ಬಂದೆವು. 25 ವರ್ಷ ಕಳೆದಿರಬಹುದು. ಇದೇ ಹೆದ್ದಾರಿ ಬದಿ ಬೊಂಬೆ ಮಾರಾಟದಿಂದ ಜೀವನ ಮಾಡುತ್ತಿದ್ದೇವೆ. ಪಡಿತರ ಕಾರ್ಡ್‌, ಆಧಾರ್ ಕಾರ್ಡ್, ಮತದಾರರ ಚೀಟಿ ಯಾವುದೂ ಇಲ್ಲ’ ಎಂದು ಚನ್ನರಾಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.