
ಕೊರಟಗೆರೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡುವುದಾಗಿ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಪ್ರಥಮದರ್ಜೆ ಕಾಲೇಜಿನ ಹೆಚ್ಚುವರಿ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಾಲೇಜು ಉತ್ತಮ ವಾತಾವರಣದಲ್ಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜನ್ನು ಇನ್ನಷ್ಟು ಉನ್ನತ ದರ್ಜೆಗೆ ಏರಿಸುವ ಅಗತ್ಯತೆ ಇದೆ. ಹೀಗಾಗಿ ಕಾಲೇಜಿನ ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಇತರೆ ಅಭಿವೃದ್ಧಿಗೆ ಶೀಘ್ರವಾಗಿ ₹1 ಕೋಟಿ ನೀಡಲಾಗುವುದು ಎಂದರು.
ಕೊರಟಗೆರೆ ಕ್ಷೇತ್ರದ ಜನರ ಆಶೀರ್ವಾದದಿಂದ ಮೂರನೇ ಬಾರಿಗೆ ರಾಜ್ಯದ ಗೃಹಸಚಿವನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದಲ್ಲಿ ಶಾಶ್ವತ ಕೆಲಸ ಮಾಡುವ ಮೂಲಕ ಜನರ ಋಣ ತೀರಿಸುತ್ತೇನೆ. ರಾಜ್ಯ ಸರ್ಕಾರದ ಗೃಹ ಸಚಿವ ಸ್ಥಾನ ಹೊತ್ತಿರುವುದರಿಂದ ಇಡೀ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವುದರಿಂದ ಕ್ಷೇತ್ರಕ್ಕೆ ಬರುವುದು ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಕ್ಷೇತ್ರದ ಜನರಿಗೆ ಅನ್ಯಾಯವಾಗದಂತೆ ಶಾಶ್ವತ ಕೆಲಸಗಳನ್ನು ಮಾಡುತ್ತೇನೆ. ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಹಂತಹಂತವಾಗಿ ಕೆಲಸ ಮಾಡುತ್ತೇನೆ. ಆ ಮೂಲಕ ನನ್ನನ್ನು ಟೀಕಿಸುವವರಿಗೆ ಉತ್ತರ ನೀಡುತ್ತೇನೆ ಎಂದರು.
ಪೌರಕಾರ್ಮಿಕರಿಗೆ ವಸತಿ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯ ನೂತನ ವಾಹನವನ್ನು ಜಟ್ಟಿಅಗ್ರಹಾರದಿಂದ ಕೊರಟಗೆರೆ ಪಟ್ಟಣದವರೆಗೆ ಸುಮಾರು 5 ಕಿ.ಮೀ ದೂರ ಸಚಿವ ಪರಮೇಶ್ವರ ಚಾಲನೆ ಮಾಡುವ ಮೂಲಕ ಉದ್ಘಾಟನೆ ಮಾಡಿ ಇಲಾಖೆ ಅಧಿಕಾರಿಗೆ ಹಸ್ತಾಂತರಿಸಲಾಯಿತು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನ, ಗೋಕುಲಕೆರೆ ಸೇರಿದಂತೆ ಪಟ್ಟಣ ಕೆಲವು ಭಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಕೆ.ಮಂಜುನಾಥ್, ತಾ.ಪಂ. ಇಒ ಅಪೂರ್ವ, ಪ.ಪಂ ಮುಖ್ಯಾಧಿಕಾರಿ ಉಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರೆಕೆರೆ ಶಂಕರ್, ಮುಖಂಡ ಎಚ್.ಕೆ.ಮಹಾಲಿಂಗಪ್ಪ, ಬಿ.ಎಸ್.ದಿನೇಶ್, ವಾಲೆ ಚಂದ್ರಯ್ಯ, ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಂದೀಶ್, ಎಲ್.ರಾಜಣ್ಣ, ಜಿ.ಎಸ್.ರವಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.