ADVERTISEMENT

ತುಮಕೂರು: ಕೊರಟಗೆರೆ ಸಂತೆಯಲ್ಲಿ ಮೂಲಸೌಕರ್ಯ ಕೊರತೆ

ಎ.ಆರ್.ಚಿದಂಬರ
Published 21 ಜುಲೈ 2025, 4:38 IST
Last Updated 21 ಜುಲೈ 2025, 4:38 IST
ಕೊರಟಗೆರೆ ಸಂತೆ
ಕೊರಟಗೆರೆ ಸಂತೆ   

ಕೊರಟಗೆರೆ: ಜಿಲ್ಲೆಯಲ್ಲೆ ಕೊರಟಗೆರೆ ಅತಿ ಚಿಕ್ಕ ತಾಲ್ಲೂಕು. ಪಟ್ಟಣ ಕೂಡ ಕಿರಿದಾಗಿದೆ. ಆದರೂ ಕೆಲವೊಂದು ಮೂಲ ಸಮಸ್ಯೆಗಳನ್ನು ಇಲ್ಲಿನ ಸಾರ್ವಜನಿಕರು ದಿನ ನಿತ್ಯ ಎದುರಿಸುತ್ತಲೆ ಇದ್ದಾರೆ. ಅದಕ್ಕೊಂದು ಪ್ರಮುಖ ಉದಾಹರಣೆ ಪ್ರತಿ ಸೋಮವಾರ ಇಲ್ಲಿ ನಡೆಯುವ ಸಂತೆ.

ಸಂತೆಗೆ ತಾಲ್ಲೂಕಿನ ಹತ್ತಾರು ಪ್ರದೇಶಗಳಿಂದ ರೈತರು ಬೆಳೆದ ಹಣ್ಣು, ತರಕಾರಿ, ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಮತ್ತು ಮಾರಾಟಕ್ಕೆ ಬರುತ್ತಾರೆ. ಆದರೆ ಇಂಥ ಸಮೃದ್ಧ ವ್ಯಾಪಾರ ಚಟುವಟಿಕೆಯ ಮಧ್ಯೆ ಸಾರ್ವಜನಿಕರು ಅನುಭವಿಸುತ್ತಿರುವ ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿದ್ದಾರೆ.

ಸಂತೆಯು ಪಟ್ಟಣದ ಮುಖ್ಯರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಪ್ರದೇಶದಲ್ಲಿ ನಡೆಯುತ್ತದೆ. ಸಂತೆ ದಿನ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಜನರ ಓಡಾಟ ತುಂಬಾ ಕಿರಿಕಿರಿ ಅನುಭವಿಸುವಂತಾಗಿದೆ. ಪಾದಚಾರಿ ಮಾರ್ಗಗಳಿಲ್ಲದೆ ಹಿರಿಯರು, ಮಕ್ಕಳು ಅಪಾಯದ ನಡುವೆಯೇ ಸಾಗಬೇಕಾಗಿದೆ.

ADVERTISEMENT

ಸಂತೆ ಸ್ಥಳದ ಬಳಿ ಪಟ್ಟಣ ಪಂಚಾಯಿತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸುಮಾರು 15 ವರ್ಷದ ಹಿಂದೆ ಶೌಚಾಲಯ ನಿರ್ಮಿಸಲಾಗಿದೆ. ನಿರ್ಮಾಣವಾದಗಿಂದಲೂ ಒಂದೇ ಒಂದು ದಿನ ಸಾರ್ವಜನಿಕ ಬಳಕೆಗೆ ನೀಡಿಲ್ಲ. ಈಗ ಅದು ದುಸ್ಥಿತಿ ತಲುಪಿದೆ. ಸಂತೆಗೆ ಬರುವ ವರ್ತಕರು ಹಾಗೂ ವ್ಯಾಪಾರಿಗಳಿಗೆ ಬಯಲು ಶೌಚವೇ ಗತಿ. ಮಹಿಳೆಯರಿಗೆ ಇದು ಸಂಕಟದ ಸ್ಥಿತಿ. ಆದರೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಬಗ್ಗೆ ಪಟ್ಟಣ ಪಂಚಾಯಿತಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. 

ಸಂತೆ ಮೈದಾನಕ್ಕೆ ಹೊಂದಿಕೊಂಡಂತೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಇದೆ. ಸಂತೆಗೆ ಬರುವವರು ಶಾಲೆಯ ಕಾಂಪೌಂಡ್ ಪಕ್ಕದಲ್ಲೆ ಶೌಚ ಮಾಡುವುದರಿಂದ ಶಾಲಾ ಮಕ್ಕಳು ದುರ್ವಾಸನೆಯಲ್ಲೆ ದಿನ ದೂಡುವ ಸ್ಥಿತಿ ನಿರ್ಮಿಣವಾಗಿದೆ.

ಸಾರ್ವಜನಿಕ ಬಳಕೆಯಾಗದೇ ಹಾಳಾಗಿರುವ ಶೌಚಾಲಯ

ಸಂತೆ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಾಡಲಾಗಿದೆ. ಆದರೆ ಅದು ಕೆಟ್ಟುನಿಂತು ವರ್ಷಗಳೆ ಕಳೆದಿವೆ. ಸಂತೆಗೆ ಬರುವ ಜನ ಹತ್ತಿರದ ಅಂಗಡಿ, ಹೋಟೆಲ್‌ಗಳಲ್ಲಿ ನೀರಿಗೆ ಅವಲಂಬಿತರಾಗಿದ್ದಾರೆ. ಬೇಸಿಗೆಯಲ್ಲಿ ಅಂಗಡಿ, ಹೋಟೆಲ್‌ನವರೂ ಕೂಡ ನೀರಿನ ಅಭಾವದ ಕಾರಣದಿಂದ ನೀರು ಕೊಡಲು ಹಿಂದೆಮುಂದೆ ನೋಡುತ್ತಾರೆ.

ಸಂತೆ ದಿನಗಳಲ್ಲಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ವಾಹನ ರಸ್ತೆಗಳ ಎರಡೂ ಬದಿಗೆ ನಿಲ್ಲಿಸಲಾಗುತ್ತಿದೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಿ, ಕೆಲವೊಮ್ಮೆ ತುರ್ತು ವಾಹನ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಸ್ ನಿಲ್ದಾಣ ಇದೇ ಸ್ಥಳದಲ್ಲಿ ಇರುವುದರಿಂದ ಸಂತೆ ದಿನ ಶಾಲಾ ಮಕ್ಕಳು ಸಾರ್ವಜನಿಕರು ಜೀವ ಕೈಲಿಡಿದು ಓಡಾಡುವಂತಾಗಿದೆ.

ಸಂತೆ ಮೈದಾನದ ಸುತ್ತಾಮುತ್ತಾ ಸಿ.ಸಿ ಟಿವಿ ಕ್ಯಮೆರಾ ಅಳವಡಿಕೆ ಇಲ್ಲದ ಕಾರಣಕ್ಕೆ ಪ್ರತಿವಾರ ಕಳ್ಳತನ ಪ್ರಕರಣ ವರದಿಯಾಗುತ್ತಿವೆ. 

ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದಿರುವುದು

ಸಂತೆ ಪಕ್ಕದಲ್ಲೆ ಸುವರ್ಣಮುಖಿ ನದಿ ಹರಿಯುತ್ತದೆ. ತ್ಯಾಜ್ಯವನ್ನು ನದಿಗೆ ಸುರಿಯಲಾಗುತ್ತಿದೆ. ಇದರಿಂದ ಇಲ್ಲಿನ ಪರಿಸರ  ಹಾಳಾಗುತ್ತಿದೆ. ಇಲ್ಲಿರುವ ಚರಂಡಿಗಳು ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿವೆ.

ಸಂತೆ ಮೈದಾನದಲ್ಲಿ ಪ್ರತಿ ಅಂಗಡಿಗಳಿಂದ ಪ್ರತಿವಾರ ಸುಂಕ ವಸೂಲಿ ಮಾಡಲಾಗುತ್ತದೆ. ಆದರೂ ಅಲ್ಲಿನ ವ್ಯಾಪಾರಿಗಳಿಗೆ ಸೌಲಭ್ಯ ಒದಗಿಸಿಲ್ಲ. ದಿನ ನಿತ್ಯ ಹೂ, ಹಣ್ಣು, ತರಕಾರಿ ಮಾರಾಟಗಾರರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೇ ಅವರು ರಸ್ತೆ ಬದಿಯಲ್ಲೆ ವ್ಯಾಪಾರ ಮಾಡುವ ಸ್ಥಿತಿ ಇದೆ. ಇವರಿಂದಲೂ ದಿನ ನಿತ್ಯ ನೂರಾರು ರೂಪಾಯಿ ಸುಂಕ ವಸೂಲಿ ಮಾಡುತ್ತಾರಾದರೂ ಸೂಕ್ತ ಸ್ಥಳ ಒದಗಿಸಿಲ್ಲ. ಇದರಿಂದ ವಾಹನ ಓಡಾಟ ಸೇರಿದಂತೆ ಪಾದಚಾರಿಗಳಿಗೆ ಸಮಸ್ಯೆ ಎದುರಾಗಿದೆ.

ದಿನನಿತ್ಯ ವ್ಯಾಪಾರಿಗಳಿಂದ ನೂರಾರು ರೂಪಾಯಿ ಸುಂಕ ವಸೂಲಿ ಮಾಡುತ್ತಾರೆ. ಆದರೆ ಯಾವುದೇ ಸೌಲಭ್ಯ ಒದಗಿಸಿಲ್ಲ. ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತೇನೆ. ಅದಕ್ಕೂ ಸುಂಕ ವಸೂಲಿ ಮಾಡುತ್ತಾರೆ
ಬಖಾರ್ ಹೊಳವನಹಳ್ಳಿ
ಸಂತೆ ಮೈದಾನದಲ್ಲಿ ಕುಡಿಯುವ ನೀರಿಲ್ಲ ಶೌಚಾಲಯವಂತೂ ಕೇಳೋ ಹಾಗೆ ಇಲ್ಲ. ಬಯಲು ಶೌಚವೇ ಗತಿಯಾಗಿದೆ. ಸಂತೆಗೆ ಬರುವ ಹೆಣ್ಣು ಮಕ್ಕಳ ಪಾಡು ಹೇಳತೀರದು
ಗೋವಿಂದರಾಜು ವ್ಯಾಪಾರಿ
ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಫುಟ್‌ಪಾತ್‌ಗಳಲ್ಲಿ ದಿನನಿತ್ಯ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವಂತಾಗಿದೆ
ಅನ್ವರ್ ಅಹಮದ್ ಕೊರಟಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.