
ಕೊರಟಗೆರೆ: ಪಟ್ಟಣದಲ್ಲಿ ಸರ್ಕಾರಿ ಬಸ್‌ಗಳು ಸರಿಯಾಗಿ ಸಂಚಾರ ನಡೆಸುತ್ತಿಲ್ಲ ಎಂದು ಆರೋಪಿಸಿ ಪ್ರಯಾಣಿಕರು ಮುಖ್ಯ ರಸ್ತೆಯಲ್ಲಿ ಬಸ್ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಹುತೇಕ ಸರ್ಕಾರಿ ಬಸ್‌ಗಳು ಪಟ್ಟಣವನ್ನು ಪ್ರವೇಶಿಸದೆ ಹೋಗುತ್ತಿವೆ. ಬಂದರೂ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ಹೋಗುತ್ತಿವೆ. ಕೆಲ ಬಸ್‌ಗಳು ಕಡಿಮೆ ಅಂತರ ಪ್ರಯಾಣಿಸುವ ಪ್ರಯಾಣಿಕರನ್ನು ಹತ್ತಿಸುತ್ತಿಲ್ಲ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಪ್ರತಿನಿತ್ಯ ಪ್ರಯಾಣಿಸುವ ಸಾರ್ವಜನಿಕರು ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಮಧುಗಿರಿ ಡಿವೈಎಸ್‌ಪಿ ಜಿ.ಮಂಜುನಾಥ್, ತಮ್ಮ ವಾಹನದಿಂದ ಇಳಿದು ಸಾರ್ವಜನಿಕರ ಸಮಸ್ಯೆ ಆಲಿಸಲಿಲ್ಲ. ಮುಖ್ಯ ರಸ್ತೆಯಲ್ಲಿ ಗಲಾಟೆ ನಡೆಯುತ್ತಿದ್ದರೂ, ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುತ್ತಿದ್ದರೂ ಕನಿಷ್ಠ ವಾಹನದಿಂದ ಕೆಳಗಿಳಿದು ಜನರ ಸಮಸ್ಯೆ ಆಲಿಸಿಲ್ಲ ಎಂದು ಪ್ರತಿಭಟನೆ ನಿರತರು ದೂರಿದರು. ಸ್ಥಳೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಕಾರರನ್ನು ಸಮಾಧಾನಪಡಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.