ADVERTISEMENT

ಕೊರೊನಾ ಆತಂಕ, ಸಂಚಾರ ಇಳಿಮುಖ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 14:30 IST
Last Updated 14 ಮಾರ್ಚ್ 2020, 14:30 IST
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಬಿಕೋ ಎನ್ನುತ್ತಿರುವುದು
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಬಿಕೋ ಎನ್ನುತ್ತಿರುವುದು   

ತುಮಕೂರು: ಕೊರೊನಾ ಬಿಸಿ ನಗರಕ್ಕೂ ತಟ್ಟಿದ್ದು, ಹಲವೆಡೆ ಶನಿವಾರ ಜನಜೀವನ ಅಸಹಜ ಸ್ಥಿತಿಗೆ ತಲುಪಿದೆ. ಸಾರ್ವಜನಿಕ ವ್ಯವಹಾರವೂ ಗಣನೀಯವಾಗಿ ಕುಸಿದಿದೆ.

ರಾಜ್ಯದಲ್ಲಿ ಕೋವಿಡ್‌–19ನಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಹಾಗೂ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹೆಚ್ಚಾದ ಕಾರಣ ಜಿಲ್ಲೆಯ ಜನರೂ ಆತಂಕಕ್ಕೀಡಾಗಿದ್ದಾರೆ. ಅನೇಕರು ಸಾರ್ವಜನಿಕವಾಗಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ನಗರದ ಹಲವು ಪ್ರದೇಶಗಳು ಶನಿವಾರ ಸ್ತಬ್ಧವಾಗಿದ್ದವು.

ನಗರದ ಪ್ರಮುಖ ಹೋಟೆಲ್, ಮಾಲ್‌ಗಳು, ಚಿತ್ರಮಂದಿರ, ಬಸ್‌, ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ನಗರದ ರಸ್ತೆಗಳಲ್ಲೂ ವಾಹನಗಳ ಸಂಚಾರ ಕಡಿಮೆಯಾಗಿತ್ತು. ಹಲವು ಜನನಿಬಿಡ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಸೋಂಕು ತಡೆಯುವ ನಿಟ್ಟಿನಲ್ಲಿ ಸಭೆ, ಸಮಾರಂಭ, ಮಾಲ್, ಚಿತ್ರಮಂದಿರಗಳನ್ನು ಶನಿವಾರದಿಂದ ಬಂದ್ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ ನಂತರ ಜನಸಂಚಾರ ಮತ್ತಷ್ಟು ಕಡಿಮೆ ಆಗಿತ್ತು.

ADVERTISEMENT

ಗ್ರಾಹಕರು ಬಾರದ ಕಾರಣ ಹೋಟೆಲ್‌ ಸೇರಿದಂತೆ ಪ್ರಮುಖ ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ. ಮಾಂಸಾಹಾರ ಸೇವನೆಯಿಂದ ವೈರಸ್ ಹರಡಲಿದೆ ಎಂಬ ತಪ್ಪು ಕಲ್ಪನೆ ಕೂಡ ಹೋಟೆಲ್‌ಗಳ ವಹಿವಾಟು ಕುಸಿಯುವಂತೆ ಮಾಡಿದೆ.

ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಗ್ರಾಹಕರ ಕೊರತೆ ಎದುರಿಸುತ್ತಿದ್ದವು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಚಿಕ್ಕಪೇಟೆ, ಮಂಡಿಪೇಟೆ, ಕುಣಿಗಲ್ ರಸ್ತೆ, ಶಿರಾ ರಸ್ತೆಯಲ್ಲಿ ಜನರ ಓಡಾಟ ಕಡಿಮೆಯಿತ್ತು. ಹಲವೆಡೆ ಬೀದಿ ಬದಿ ತರಕಾರಿ ಮಾರಾಟ ಮಾಡುವವರ ಸಂಖ್ಯೆಯೂ ಇಳಿಕೆಯಾಗಿತ್ತು. ಬಸ್‌, ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.

ಮುಚ್ಚದ ಶಾಪಿಂಗ್‌ಮಾಲ್‌

ಸರ್ಕಾರದ ಆದೇಶದ ಹೊರತಾಗಿಯೂ ನಗರದ ಹಲವು ಶಾಪಿಂಗ್‌ ಮಾಲ್‌ಗಳು ತೆರೆದಿದ್ದವು. ತಮ್ಮ ವ್ಯವಸ್ಥಾಪಕರಿಂದ ಯಾವುದೇ ಸೂಚನೆ ಬಾರದ ಕಾರಣ ತಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.